ಅಂಧರಿಗೆ ಸಂಘ-ಸಂಸ್ಥೆಗಳಿಂದ ವಂಚನೆ: ಪ್ರೊ.ಚಂಪಾ ಆರೋಪ
ಬೆಂಗಳೂರು, ಎ.3: ಅಂಧರ ಹೆಸರಿನಲ್ಲಿ ಸಂಘ-ಸಂಸ್ಥೆಗಳು ಕೋಟ್ಯಂತರ ರೂಪಾಯಿ ಹಣವನ್ನು ದೋಚುತ್ತಿರುವುದು ಕಳವಳಕಾರಿ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಕರ್ನಾಟಕ ಅಂಧರ ವಿಮೋಚನಾ ವೇದಿಕೆ ಆಯೋಜಿಸಿದ್ದ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಅಂಧ ಕಲಾವಿದ ಎಸ್.ಚಂದ್ರಕುಮಾರ್ ಸ್ಮರಣೆ ಹಾಗೂ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುರುಡರ ಕಲ್ಯಾಣದ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಇತ್ತೀಚಿಗೆ ಸಂಘ-ಸಂಸ್ಥೆಗಳು ಅಂಧರನ್ನು ಮುಂದಿಟ್ಟುಕೊಂಡು ಹಣಗಳಿಸುತ್ತಿವೆ.ಇದರಿಂದಾಗಿ ಸರಕಾರದಿಂದ ದೊರೆಯಬೇಕಿರುವ ಸೌಲಭ್ಯಗಳಿಂದಲೂ ಅಂಧರು ವಂಚಿತರಾಗುತ್ತಿ ದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದರು
ಸಮಾಜದಲ್ಲಿ ಅಂಧರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡುಹಿಡಿದು, ಈ ಸಮಸ್ಯೆಗಳಿಗೆ ಪರಿಹಾರ ರೂಪಿಸಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ಅಗತ್ಯ ಎಂದ ಅವರು, ಅಂಧರ ಕ್ಷೇಮಾಭಿವೃದ್ಧಿಗೆ ರಾಜ್ಯ ಸರಕಾರ ಮತ್ತು ಮಾಧ್ಯಮಗಳು ಯೋಜನಾ ಬದ್ಧವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಅಂಧರ ವಿಮೋಚನಾ ವೇದಿಕೆ ಸಂಚಾಲಕ ಮುದಿಗೆರೆ ರಮೇಶ್ ಕುಮಾರ್ ಮಾತನಾಡಿ, ಸರಕಾರ ರೂಪಿಸುವ ಯೋಜನೆಗಳು ನೇರವಾಗಿ ಅಂಧರಿಗೆ ತಲುಪಲು ಮತ್ತು ರಾಜ್ಯದಲ್ಲಿನ ಅಂಧರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕವಾದ ಆಯೋಗವನ್ನು ರಚಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ, ನಿರ್ದೇಶಕ ಟಿ.ಎಸ್. ನಾಗಾಭರಣ, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





