ಆರ್‌ಟಿಇ ಪ್ರವೇಶ: ಲಭ್ಯವಿರುವ ಸೀಟ್‌ಗಳಿಗಿಂತ ದುಪ್ಪಟ್ಟು ಅರ್ಜಿಗಳು ಸಲ್ಲಿಕೆ
ಶಿವಮೊಗ್ಗ ಜಿಲ್ಲೆಯಲ್ಲಿ ಲಭ್ಯವಿರುವುದು 2,369 ಸೀಟು, ಅರ್ಜಿ ಬಂದಿರುವುದು 4,940

ಶಿವಮೊಗ್ಗ, ಎ.3: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಕಾಯ್ದೆಯಡಿ, ಪ್ರಸ್ತುತ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕಳೆದ ತಿಂಗಳಿನಿಂದಲೇ ವಿದ್ಯುಕ್ತವಾಗಿ ಆರಂಭಿಸಿದೆ. ಅರ್ಜಿ ಸಲ್ಲಿಕೆಗೆ ಸರಕಾರ ನಿಗದಿಪಡಿಸಿದ್ದ ಕಾಲಾವಧಿ ಈಗಾಗಲೇ ಪೂರ್ಣಗೊಂಡಿದೆ. ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಕೂಡ ಲಭ್ಯವಿರುವ ಸೀಟ್‌ಗಳಿಗಿಂತ ದುಪ್ಪಟ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸುವ ಪ್ರಕಾರ, ಪ್ರಸ್ತುತ ವರ್ಷ ಶಿವಮೊಗ್ಗ ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಎಲ್.ಕೆ.ಜಿ. ಹಾಗೂ 1 ನೆ ತರಗತಿ ಪ್ರವೇಶಕ್ಕೆ 2,369 ಸೀಟ್‌ಗಳು ಲಭ್ಯವಿದೆ. ಆದರೆ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 4,940, ಲಭ್ಯವಿರುವ ಸೀಟ್‌ಗಳಿಗಿಂತ ಸರಿಸುಮಾರು 2,571 ಅರ್ಜಿಗಳು ಹೆಚ್ಚು ಸಲ್ಲಿಕೆಯಾಗಿವೆ. ಆರ್‌ಟಿಇ ಸೀಟ್ ಗಿಟ್ಟಿಸಿಕೊಳ್ಳಲು ಸಾಕಷ್ಟು ಪೈಪೋಟಿ ಕಂಡುಬಂದಿದೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ, ನಿರೀಕ್ಷಿಸಿದಂತೆ ಅತೀ ಹೆಚ್ಚು ಸಂಖ್ಯೆಯ ಖಾಸಗಿ ಶಾಲೆಗಳಿರುವ ಶಿವಮೊಗ್ಗ ತಾಲೂಕಿನಲ್ಲಿಯೇ ಸರಿಸುಮಾರು 2,500 ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಭದ್ರಾವತಿ ಎರಡನೆ ಸ್ಥಾನದಲ್ಲಿದೆ. ಉಳಿದಂತೆ ಹೊಸನಗರ ತಾಲೂಕಿನಲ್ಲಿ ಅತೀ ಕಡಿಮೆ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿವೆ. ಇಲ್ಲಿ ಎಲ್‌ಕೆ.ಜಿ ವಿಭಾಗದಲ್ಲಿ ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ. ತಾಲೂಕುವಾರು ವಿವರ:
ಭದ್ರಾವತಿ ತಾಲೂಕಿನಲ್ಲಿ 1,154 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಎಲ್‌ಕೆಜಿ ವಿಭಾಗದಲ್ಲಿ 968 ಹಾಗೂ ಒಂದನೆ ತರಗತಿಗೆ 186 ಅರ್ಜಿಗಳು ಸಲ್ಲಿಕೆಯಾಗಿವೆ. ಹೊಸನಗರದಲ್ಲಿ ಒಟ್ಟು 89 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್‌ಕೆಜಿ ವಿಭಾಗದಡಿ ಯಾವುದೇ ಅರ್ಜಿಗಳು ಬಂದಿಲ್ಲ. ಪ್ರಸ್ತುತ ಸಲ್ಲಿಕೆಯಾಗಿರುವ ಅರ್ಜಿಗಳೆಲ್ಲ ಒಂದನೆ ತರಗತಿಗೆ ಸಂಬಂಧಿಸಿದ್ದಾಗಿವೆೆ. ಸಾಗರದಲ್ಲಿ ಒಟ್ಟು 246 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್‌ಕೆಜಿಗೆ 144, ಒಂದನೇ ತರಗತಿಗೆ 102 ಅರ್ಜಿಗಳು ಸಲ್ಲಿಕೆಯಾಗಿವೆ. ಶಿಕಾರಿಪುರದಲ್ಲಿ 592 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್‌ಕೆಜಿಗೆ 82 ಹಾಗೂ ಒಂದನೆ ತರಗತಿಗೆ 51 ಅರ್ಜಿಗಳು ಸಂದಾಯವಾಗಿವೆ. ಶಿವಮೊಗ್ಗದಲ್ಲಿ ಅತೀ ಹೆಚ್ಚು 2,557 ಅರ್ಜಿಗಳು ಬಂದಿವೆ. ಎಲ್‌ಕೆಜಿ ವಿಭಾಗದಲ್ಲಿ 1,334 ಹಾಗೂ ಒಂದನೆ ತರಗತಿಗೆ 1,223 ಅರ್ಜಿಗಳು ಸಲ್ಲಿಕೆಯಾಗಿವೆ. ಸೊರಬದಲ್ಲಿ 152 ಅರ್ಜಿಗಳು ಸಲ್ಲಿಕೆಯಾಗಿದ್ದು, 86 ಅರ್ಜಿಗಳು ಎಲ್‌ಕೆಜಿಗೆ ಸಂಬಂಧಿಸಿದ್ದಾಗಿದ್ದರೆ, 66 ಅರ್ಜಿಗಳು ಒಂದನೆ ತರಗತಿಯದ್ದಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 150 ಅರ್ಜಿಗಳು ಬಂದಿವೆ. ಎಲ್,ಕೆ.ಜಿ. ವಿಭಾಗದಲ್ಲಿ 112 ಅರ್ಜಿಗಳು ಹಾಗೂ ಒಂದನೆ ತರಗತಿಗೆ 38 ಅರ್ಜಿಗಳು ಬಂದಿವೆ. ಆನ್‌ಲೈನ್ ಲಾಟರಿ ಮೂಲಕ ಆಯೆ: ಡಿ.ಡಿ.ಪಿ.ಐ. ನಾರಾಯಣಗೌಡ
*** ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಗೌಡರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಆನ್‌ಲೈನ್‌ನಲ್ಲಿ ಬಂದಿರುವ ಅರ್ಜಿಗಳನ್ನು ಆನ್‌ಲೈನ್ ಲಾಟರಿಯ ಮೂಲಕ ಆಯ್ಕೆ ಮಾಡಲಾಗುವುದು. ಎ.13 ರಂದು ಲಾಟರಿ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆ ಯಾದ ಮಕ್ಕಳ ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ಹೋಗಲಿದೆ. ಇದಾದ ನಂತರ ಪೋಷಕರು ತಮ್ಮ ಮಕ್ಕಳಿಗೆ ಸೀಟ್ ಲಭ್ಯವಾದ ಶಾಲೆಗಳಿಗೆ ತೆರಳಿ ಸೂಕ್ತ ದಾಖಲಾತಿ ಸಲ್ಲಿಸಿ, ಮಕ್ಕಳ ಪ್ರವೇಶಕ್ಕೆ ಕ್ರಮಕೈಗೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.







