ನ್ಯಾಯಾಲಯದಿಂದ ಪ್ರೇಮಲತಾಗೆ ಪರಿಹಾರ ಸಿಗಲಿ: ನಿಡುಮಾಮಿಡಿ ಶ್ರೀ
ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಆರೋಪ

ಗದಗ, ಎ.3: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತ ಮಹಿಳೆ ಪ್ರೇಮಲತಾಗೆ ಅನ್ಯಾಯವಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಕ್ತರು ಹಾಗೂ ಗುರುಗಳ ನಡುವಿನ ಸಂಬಂಧ ವ್ಯಾವಹಾರಿಕವಾದರೆ ಇಂತಹ ಘಟನೆಗಳು ನಡೆಯುತ್ತವೆ. ಪ್ರೇಮಲತಾಗೆ ಅನ್ಯಾಯವಾಗಿದೆ. ಆದರೆ, ಪರಿಹಾರದ ಮಾತು ಇಲ್ಲ. ನ್ಯಾಯಾಲಯ ಪ್ರೇಮಲತಾಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನಲ್ಲಿ ಕೆಲವು ಅಂಶಗಳನ್ನು ವಿಶ್ಲೇಷಿಸಿದೆ. ಆದರೆ, ಸಮಗ್ರವಾಗಿ ವಿಶ್ಲೇಷಣೆ ಮಾಡಿಲ್ಲ. ನ್ಯಾಯಾಲಯದ ಬಗ್ಗೆ ಜನರು ಇಟ್ಟಿರುವ ವಿಶ್ವಾಸದ ನೆಲೆಯಲ್ಲಿ ನ್ಯಾಯಾಲಯ ಮುಕ್ತ ಮನಸ್ಸಿನಿಂದ ಪ್ರಕರಣದ ವಿಶ್ಲೇಷಣೆ ಮಾಡಬಹುದಿತ್ತು ಎಂದು ಅವರು ಹೇಳಿದರು.
ಪರಸ್ಪರ ಒಪ್ಪಿತ ಅನೈತಿಕ ಸಂಬಂಧ ಎಂದು ನ್ಯಾಯಾಲಯವೇ ಹೇಳಿದೆ. ಹಾಗಾದರೆ ಇದರ ನೈತಿಕ ಹೊಣೆಯನ್ನು ಯಾರು ಹೊರಬೇಕು ಎಂದು ಪ್ರಶ್ನಿಸಿದ ಅವರು, ರಾಮಚಂದ್ರಾಪುರ ಮಠದ ಆವರಣದಲ್ಲಿ ಮಾಧ್ಯಮದವರ ಮೇಲೆ ಮಠದವರು ಪ್ರದರ್ಶಿಸಿದ ಗೂಂಡಾ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣವು ಕಾನೂನು ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಅದನ್ನು ವೈಚಾರಿಕವಾಗಿ ಎದುರಿಸಬೇಕೆ ಹೊರತು, ಭಾವನಾತ್ಮಕವಾಗಿ ಉದ್ವೇಗಕ್ಕೆ ಒಳಗಾಗಿ ಗೂಂಡಾ ವರ್ತನೆ ಮಾಡುವುದು ತಪ್ಪು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಜನರ ಹಿತಕ್ಕೆ ಶ್ರಮಿಸಿ
ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಕ್ಷಭೇದ ಮರೆತು ಜನರ ಹಿತಕಾಪಾಡಲು ಶ್ರಮಿಸಬೇಕು. ನೆಲ, ಜಲ, ಭಾಷೆ ವಿಚಾರ ಬಂದಾಗ ರಾಜಕಾರಣ ಮಾಡದೆ, ಪ್ರತಿಷ್ಠೆ ಬಿಟ್ಟು ಒಗ್ಗಟ್ಟಾಗಬೇಕು.
-ವೀರಭದ್ರ ಚನ್ನಮಲ್ಲ ಸ್ವಾಮಿ, ನಿಡುಮಾಮಿಡಿ ಮಠ.





