ಬರಗಾಲ ನಿರ್ವಹಣೆಯಲ್ಲಿ ಜನಪ್ರತಿನಿಧಿಗಳು ವಿಫಲ: ರಾಮೇಗೌಡ
ಶಿಕಾರಿಪುರ,ಎ.3: ರಾಜ್ಯದಲ್ಲಿ ಬರಗಾಲದಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು, ಈ ಸಂದರ್ಭದಲ್ಲಿ ಬರವನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳದ್ದಾಗಿದೆ. ಆದರೆ, ಸದನದಲ್ಲಿ ಜನಪ್ರತಿನಿಧಿಗಳು ಗೈರುಹಾಜರಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹು ದೊಡ್ಡ ದುರಂತ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎ.ರಾಮೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಲ್ಲಮಪ್ರಭು ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧ್ದಿ ಸವಾಲುಗಳು ಹಾಗೂ ಪರಿಹಾರಗಳು, ಮತ್ತು ಚೇಂಜಿಂಗ್ ಟ್ರೆಂಡ್ಸ್ ಇನ್ ರೂರಲ್ ಇಂಡಿಯಾ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ದೈನಿಂದಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಂಘಟನಾತ್ಮಕ ಹಾಗೂ ರಚನಾತ್ಮಕವಾದ ಹೋರಾಟದ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಿದ ಅವರು, ಆಡಳಿತ ನಡೆಸುವ ಅಧಿಕಾರಿಶಾಹಿ ವ್ಯವಸ್ಥೆಗೆ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಅರಿವಿಲ್ಲವಾಗಿದು,್ದ ರಾಜ್ಯಾದ್ಯಂತ ಬರಗಾಲದಿಂದ ಜನಸಾಮಾನ್ಯರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಬರವನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳಲು ತೀವ್ರ ಚರ್ಚೆ ನಡೆಯಬೇಕಾದ ಸದನದಲ್ಲಿ ಸದಸ್ಯರು ಗೈರುಹಾಜರಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹು ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟಕರು ಸ್ವಾರ್ಥಿಗಳಾಗುತ್ತಿದ್ದು, ಹೋರಾಟವಿಲ್ಲದ ದುರ್ದಿನ ಎದುರಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಏಕಾಏಕಿ ವಿದ್ಯುತ್ ದರ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಪ್ರತಿರೋಧವಿಲ್ಲವಾಗಿದೆ. ಸಮಾಜದಲ್ಲಿನ ನಿತ್ಯದ ಆಗುಹೋಗುಗಳ ಬಗ್ಗೆ ಪ್ರತಿಕ್ರಿಯಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾಗಿದೆ. ಸ್ವಾರ್ಥ ಭಾವನೆಯನ್ನು ತೊರೆದು ಗುರಿ ತಲುಪುವವರೆಗೂ ಹೋರಾಟ ನಡೆಸುವಂತೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ನಿತ್ಯ ಹೊಸ ಹೊಸ ಸಮಸ್ಯೆಗಳು ಉದ್ಭವವಾಗುತ್ತಿದ್ದು, ಅಭಿವೃದ್ಧಿಗೆ ಸವಾಲಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಬಿಡುಗಡೆಯಾದ ಪುಸ್ತಕದಲ್ಲಿನ ಪರಿಹಾರದಿಂದ ಸಮಸ್ಯೆ ಬಗೆಹರಿಸಲು ಅಸಾಧ್ಯ ಎಂದ ಅವರು, ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಅರಿತು ವರ್ತಿಸಿದಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಜೆ.ಎಸ್ ಸದಾನಂದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳನ್ನು ಕೇವಲ ಮೇಲ್ನೋಟದಿಂದ ಗುರುತಿಸದೆ ನೈಜ ಸಮಸ್ಯೆಯನ್ನು ಅರಿತು ವಿಭಿನ್ನ ದೃಷ್ಟಿಕೋನದಿಂದ ಪರಿಹಾರಕ್ಕೆ ಯತ್ನಿಸಬೇಕಾಗಿದೆ. ಸಮಸ್ಯೆ ಪರಿಹಾರಕ್ಕೆ ಅಧ್ಯಯನದ ಜೊತೆಗೆ ಗ್ರಾಮೀಣ ಪ್ರದೇಶ ಬದಲಾವಣೆಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಕಾಲೇಜಿನ ಇತಿಹಾಸ ಶಾಸ್ತ್ರ ಪ್ರಾಧ್ಯಾಪಕ ಡಿ.ಕೆ ಮಂಜಪ್ಪ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕುವೆಂಪು ವಿ.ವಿ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕ ಡಾ.ಚಂದ್ರಶೇಖರ್, ಅಲ್ಲಮ ಸ್ನಾತಕೋತ್ತರ ಕೇಂದ್ರದ ಡಾ.ಕುಂಸಿ ಉಮೇಶ, ಪುಸ್ತಕದ ಸಹಸಂಪಾದಕರಾದ ಉಪನ್ಯಾಸಕ ಬಿ.ಎನ್ ಸುನೀಲ್ ಕುಮಾರ್,ಅಶ್ವಿನಿ ಬಿದರಹಳ್ಳಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







