ವಾಹನ ಸಂಚಾರಕ್ಕೆ ವಿಘ್ನವಾಗಿರುವ ಅವೈಜ್ಞಾನಿಕ ಹಂಪ್ಸ್‌ಗಳು
¢ಅಝೀಝ್ ಕಿರುಗುಂದ

ಮೂಡಿಗೆರೆ, ಎ.3: ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮುದ್ರೆಮನೆ ಗ್ರಾಮದ ಅಪಾಯಕಾರಿ ತಿರುವಿನಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ವಾಹನ ಸಂಚಾರಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ.
ಹೊರ ಜಿಲ್ಲೆಗಳ ಸಹಿತ ಹೊರ ರಾಜ್ಯಗಳಿಂದ ಅತ್ಯಂತ ವೇಗವಾಗಿ ಚಲಿಸುವ ವಾಹನಗಳು ಈ ತಿರುವಿನಲ್ಲಿ ಪರಸ್ಪರ ಡಿಕ್ಕಿ ಹೊಡೆದು. ಅನೇಕ ಸಾವು-ನೋವುಗಳು ಸಂಭವಿಸಿದ್ದವು. ಪರಿಣಾಮ ರಸ್ತೆ ಅಗಲಗೊಳಿಸಿ, ವಿಭಜಕ, ಸೂಚನಾ ಫಲಕಗಳನ್ನು ನಿರ್ಮಿಸಲು ವಾಹನ ಸವಾರರು, ಸಾರ್ವಜನಿಕರು, ಸ್ಥಳೀಯರು ಒತ್ತಾಯಿಸಿದ್ದರು.
ಜನ ಸಮುದಾಯದ ಒತ್ತಡಗಳಿಗೆ ಮಣಿದ ಸಕಲೇಶಪುರದಲ್ಲಿ ಕಚೇರಿ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯ ಎಡ ಬದಿಯಲ್ಲಿ ರಸ್ತೆಗೆ ಹೊಂದಿಕೊಂಡಿದ್ದ ಬೃಹತ್ ಕಲ್ಲು ಬಂಡೆಯನ್ನು ಸಿಡಿಸಿ ತೆರವುಗೊಳಿಸಿದ್ದರು. ಈ ಬಂಡೆಯ ಪರಿಣಾಮ ರಸ್ತೆಯ ಒಂದು ಬದಿಯೇ ಇಲ್ಲವಾಗಿದೆ.
ಬಂಡೆಗಲ್ಲುಗಳ ತೆರವು ಬಳಿಕ ತಿರುವಿನ ಒಂದು ಬದಿಯಲ್ಲಿ ಮಾತ್ರ ಮೂರು ರಸ್ತೆ ಉಬ್ಬು ತಗ್ಗುಗಳನ್ನು ನಿರ್ಮಿಸಲಾಗಿತ್ತು. ಉಬ್ಬಿನ ಸಮೀಪದಲ್ಲಿ ಅಪಾಯಕಾರಿ ತಿರುವು, ನಿಧಾನವಾಗಿ ಚಲಿಸಿ ಎಂಬ ಸೂಚನಾ ಪಲಕ ನಿರ್ಮಿಸಲಾಗಿತ್ತಾದರೂ ರಸ್ತೆ ಉಬ್ಬುಗಳ ಬಗ್ಗೆ ಎಚ್ಚರಿಸುವ ಸೂಚನಾ ಫಲಕಗಳನ್ನು ನಿರ್ಮಿಸಲಿಲ್ಲ. ನಂತರ ಕೆಲವು ಜನಪ್ರತಿನಿಧಿಗಳ ಪ್ರತಿಷ್ಠೆಗಾಗಿ ರಸ್ತೆಯ ಎರಡು ಬದಿಯಲ್ಲೂ ಉಬ್ಬು, ತಗ್ಗುಗಳನ್ನು ನಿರ್ಮಿಸಲಾಯಿತು. ಇದರ ಪರಿಣಾಮ ತಿರುವಿನ 50 ಅಡಿ ಅಂತರದಲ್ಲಿ ಎರಡು ಕಡೆ ತಲಾ ಐದು ಉಬ್ಬುಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದರಂತೆ ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಲಾಗಿದೆ. ಉಬ್ಬುಗಳ ನಡುವೆ ಒಂದು ಅಡಿ ಅಂತರ ಬಿಟ್ಟು ನಿರ್ಮಿಸಿರುವುದು ವಾಹನಗಳ ಸಂಚಾರಕ್ಕೆ ವಿಘ್ನವನ್ನುಂಟು ಮಾಡುತ್ತಿವೆ ಎನ್ನುವ ಆರೋಪಗಳು ಕೇಳಿ ಬರತೊಡಗಿವೆ.
ಈ ರಸ್ತೆ ಉಬ್ಬುಗಳ ನಿರ್ಮಾಣದ ಬಳಿಕ ವಾಹನಗಳ ಸಂಚಾರಿಗಳು ರಸ್ತೆ ಮೇಲೆ ಸಾಗದೇ ರಸ್ತೆ ಬದಿಯಲ್ಲಿ ವಾಹನಗಳನ್ನು ಇಳಿಸಿ ಮುಂದಕ್ಕೆ ಚಲಿಸುತ್ತಿದ್ದಾರೆ. ಹೀಗಾಗಿ ಹೆದ್ದಾರಿ ಬದಿ ಮಣ್ಣ ರಸ್ತೆಯೇ ಸಂಚಾರವನ್ನು ಸುಗಮಗೊಳಿಸಿದೆ. ರಸ್ತೆ ಬದಿ ಸರಿಯಾದ ಸೂಚನಾ ಫಲಕ ಹಾಗೂ ಬಿಳಿ ಬಣ್ಣದ ಗೆರೆಗಳ ಸೂಚನೆಯ ಅಗತ್ಯವಿದೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬಹುದೇ ಎಂದು ಕಾದು ನೋಡಬೇಕಿದೆ.







