ಮೊಸುಲ್ ವಿವಿಯ ಕೆಮಿಸ್ಟ್ರಿ ಲ್ಯಾಬ್‌ನಲ್ಲಿ ಸ್ಫೋಟಕಗಳನ್ನು ಉತ್ಪಾದಿಸುವ ಐಸಿಸ್

ವಾಶಿಂಗ್ಟನ್,ಎ.3: ಐಸಿಸ್ ಭಯೋತ್ಪಾದಕರು ಇರಾಕ್‌ನ ಮೊಸುಲ್ ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ಪ್ರಯೋಗಶಾಲೆಯನ್ನು, ರಾಸಾಯನಿಕ ಬಾಂಬ್‌ಗಳು ಮತ್ತು ಆತ್ಮಹತ್ಯಾದಾಳಿಯ ಬೆಲ್ಟ್‌ಗಳು ಸೇರಿದಂತೆ ಅಪಾಯಕಾರಿ ಸ್ಫೋಟಕಗಳನ್ನು ತಯಾರಿಸಲು ಬಳಸಿಕೊಳ್ಳುತ್ತಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದೊಂದು ವರ್ಷದಿಂದ ಐಸಿಸ್ ಮೊಸುಲ್ ವಿವಿಯ ರಾಸಾಯನಶಾಸ್ತ್ರ ಲ್ಯಾಬ್‌ನಲ್ಲಿ ಸ್ಫೋಟಕ ಉಪಕರಣಗಳನ್ನು ಉತ್ಪಾದಿಸುವ ಜೊತೆಗೆ, ಅವುಗಳನ್ನು ನಿರ್ಮಿಸುವ ಬಗ್ಗೆ ಉಗ್ರರಿಗೆ ತರಬೇತಿ ಕೂಡಾ ನೀಡುತ್ತಿದೆಯೆಂದು ಅಮೆರಿಕ ಹಾಗೂ ಇರಾಕಿ ಸೇನಾಧಿಕಾರಿಗಳು ತಿಳಿಸಿರುವುದಾಗಿ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಮೊಸುಲ್ ವಿವಿಯ ರಾಸಾಯನಶಾಸ್ತ್ರ ಪ್ರಯೋಗಾಲಯದ ಸೌಲಭ್ಯಗಳು ಐಸಿಸ್‌ನ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಿದೆ ಹಾಗೂ ಇಲ್ಲಿ ತರಬೇತಿ ಪಡೆದ ಉಗ್ರರು ಬಾಂಬ್ ತಯಾರಿಕೆಯಲ್ಲಿ ಅನುಭವ ಪಡೆದು ತಮ್ಮ ತಾಯ್ನಿಡಿಗೆ ಹಿಂತಿರುಗುತ್ತಾರೆ ಎಂದು ಇರಾಕ್‌ನ ಉನ್ನತ ಸ್ಫೋಟಕ ತಜ್ಞ ಜನರಲ್ ಹಾತೆಮ್ ಮ್ಯಾಗ್‌ಸೊಸಿ ತಿಳಿಸಿದ್ದಾರೆ. ಬ್ರಸೆಲ್ಸ್ ಹಾಗೂ ಪ್ಯಾರಿಸ್ ದಾಳಿಗಳಲ್ಲಿ ಬಳಸಲಾಗಿದ್ದ ಪೆರೊಕ್ಸೈಡ್ ಆಧಾರಿತ ರಾಸಾಯನಿಕ ಬಾಂಬ್‌ಗಳನ್ನು ಇಲ್ಲಿ ತಯಾರಿಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.





