ಬಿ.ಸಿ.ರೋಡ್ ಮೇಲ್ಸೇತುವೆಯಲ್ಲಿ ಆಟೋ-ಸ್ಕೂಟರ್ ಅಪಘಾತ: ಐವರಿಗೆ ಗಾಯ,ಓರ್ವನ ಸ್ಥಿತಿ ಗಂಭೀರ

ಬಂಟ್ವಾಳ: ಆಟೋ ರಿಕ್ಷಾ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಗಾಯಗೊಂಡ ಘಟನೆ ಬಿ.ಸಿ.ರೋಡ್ ಮೇಲ್ಸೇತುವೆಯಲ್ಲಿ ರವಿವಾರ ಸಂಜೆ ನಡೆದಿದೆ.
ಅಪಘಾತದಿಂದ ಆಟೋ ರಿಕ್ಷಾದಲ್ಲಿ ಸಂಚಾರಿಸುತ್ತಿದ್ದ ತಾಲೂಕಿನ ನಾವೂರು ನಿವಾಸಿಗಳಾದ ಮುಹಮ್ಮದ್ ರಿಯಾಝ್, ಅಬ್ದುಲ್ ಹಮೀದ್, ಅಬ್ದುಲ್ ಹಕೀಂ, ಇಮ್ರಾನ್, ಸ್ಕೂಟರ್ ಸವಾರ ಬಿ.ಸಿ.ರೋಡ್ ಶಾಂತಿಅಂಗಡಿ ನಿವಾಸಿ ಅಬ್ದುಲ್ ಸಾಜಿದ್ ಎಂಬವರು ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಅಬ್ದುಲ್ ಸಾಜಿದ್ ತೀವ್ರ ಸ್ವರೂಪದ ಗಾಯಗೊಂಡಿದ್ದು, ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಸಣ್ಣ ಪುಟ್ಟ ಗಾಯಗೊಂಡಿದ್ದು, ಚಿಕಿತ್ಸೆಯ ಬಳಿಕ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಅಬ್ದುಲ್ ಸಾದಿಕ್ ಪಾಣೆಮಂಗಳೂರಿನಿಂದ ಕೈಕಂಬ ಕಡೆಗೆ ತನ್ನ ಸ್ಕೂಟರ್ ನಲ್ಲಿ ಸಂಚಾರಿಸುತ್ತಿದ್ದಾಗ ಏಕ ಮುಖ ಸಂಚಾರದ ಬಿ.ಸಿ.ರೋಡ್ ಮೇಲ್ಸೇತುವೆಯಲ್ಲಿ ಕೈಕಂಬದಿಂದ ಬಂಟ್ವಾಳದ ಕಡೆಗೆ ಸಂಚಾರಿಸುತ್ತಿದ್ದ ಆಟೋ ರಿಕ್ಷಾ ವಿರುದ್ಧ ದಿಕ್ಕಿನಲ್ಲಿ ಬಂದು ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ರಭಸಕಜೆ ಸ್ಕೂಟರ್ ಮುಂಭಾಗ ನಜ್ಜುಗುಜ್ಜಾಗಿದೆ. ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನು ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಿದರು.
ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಟ್ರಾಫಿಕ್ ಪೋಲೀಸರು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.







