ಎನ್‌ಐಎ ಅಧಿಕಾರಿಯ ಹತ್ಯೆ
ಉತ್ತರಪ್ರದೇಶ
ಲಕ್ನೊ, ಎ.3: ರಾಷ್ಟ್ರೀಯ ತನಿಖೆ ಸಂಸ್ಥೆಯ(ಎನ್‌ಐಎ) ಅಧಿಕಾರಿ ಯೊಬ್ಬರನ್ನು ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ಶನಿವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. ಎನ್‌ಐಎ ಇದನ್ನೊಂದು ‘ಯೋಜಿತ ದಾಳಿ’ ಯೆಂದು ವಿವರಿಸಿದೆ.
ಈ ದಾಳಿಗೆ, ಭಯೋತ್ಪಾದಕ ಸಂಬಂಧ ಸಹಿತ ಎಲ್ಲ ಸಾಧ್ಯತೆಗಳ ಕುರಿತು ತನಿಖೆ ನಡೆಸುತ್ತಿದ್ದೇವೆಂದು ಉತ್ತರಪ್ರದೇಶ ಅಧಿಕಾರಿಗಳು ತಿಳಿಸಿದ್ದಾರೆ. ಹತ ಅಧಿಕಾರಿ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕಾರೊಂದರಲ್ಲಿ ಪ್ರಯಾಣಿಸುತ್ತಿದ್ದರು. ಅವರ ಪತ್ನಿಯೂ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಎನ್‌ಐಎಯ ಪೊಲೀಸ್ ಉಪಾಧಿಕ್ಷಕ ಮುಹಮ್ಮದ್ ತಂಝಿಲ್ ಹಾಗೂ ಅವರ ಪತ್ನಿ ಫರ್ಝಾನಾ ಎಂಬವರಿಗೆ ಸಾಹಸ್‌ಪುರ ಪಟ್ಟಣದ ಸಮೀಪ, ಮೋಟಾರ್ ಬೈಕೊಂದರಲ್ಲಿ ಬಂದಿದ್ದ ಇಬ್ಬರು ಅಜ್ಞಾತ ಬಂದೂಕು ಧಾರಿಗಳು ಅತಿ ಸಮೀಪದಿಂದ ಗುಂಡು ಹಾರಿಸಿದ್ದರು. ಅವರ ಮಕ್ಕಳಿಗೆ ದಾಳಿಯಲ್ಲಿ ಗಾಯಗಳಾಗಿಲ್ಲ.
ಈ ದಾಳಿಗೆ ಭಯೋತ್ಪಾದಕರ ಸಂಬಂಧದ ಸಾಧ್ಯತೆಯ ಕುರಿತಾದ ಪ್ರಶ್ನೆಗೆ, ಯಾವುದನ್ನೂ ತಳ್ಳಿ ಹಾಕಲಾಗದು. ಜಿಲ್ಲೆಯಲ್ಲಿ ಅತಿ ಗಂಭೀರವಾದ ಅಪರಾಧವೊಂದು ನಡೆದಿದೆ. ತಾವದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಧಿಕಾರಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಿಜವಾಗಿ ನಡೆದುದೇನೆಂಬ ವಿವರ ಶೀಘ್ರವೇ ತಿಳಿಯಲಿದೆಯೆಂದು ಉತ್ತರಪ್ರದೇಶ ಪೊಲೀಸ್‌ನ ಹೆಚ್ಚುವರಿ ಮಹಾ ನಿರ್ದೇಶಕ ದಲ್ಜಿತ್ ಚೌಧರಿ ಉತ್ತರಿಸಿದ್ದಾರೆ.
ದಾಳಿ ನಡೆದೊಡನೆಯೇ ರಾಜ್ಯದ ಗಡಿ ಗಳನ್ನು ಮುಚ್ಚಲಾಗಿದೆ. ತಾವು ಆರೋಪಿ ಗಳು ಹಾಗೂ ಹತ್ಯೆಗೆ ಕಾರಣವನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳದಲ್ಲಿವೆ. ಹತ್ಯೆಗೆ ಬಳಸಲಾಗಿರುವ 9 ಎಂಎಂ ಪಿಸ್ತೂಲು ನಾಡ ಬಂದೂಕೇ ಅಥವಾ ಕಾರ್ಖಾನೆಯಲ್ಲಿ ತಯಾ ರಾದುದೇ ಎಂಬುದನ್ನು ಖಚಿತಪಡಿಸುವುದಕ್ಕೂ ತಾವು ಪ್ರಯತ್ನಿಸುತ್ತಿದ್ದೇವೆ. ಇದು ಖಂಡಿತವಾಗಿಯೂ ಯೋಜಿತ ದಾಳಿಯೇ ಹೊರತು ದರೋಡೆ ಯತ್ನವಲ್ಲ ಎಂದವರು ಹೇಳಿದ್ದಾರೆ.
ಸೋದರ ಸಂಬಂಧಿಯ ವಿವಾಹದಲ್ಲಿ ಭಾಗವಹಿಸಿ ತಂಝಿಲ್, ಹೆಂಡತಿ ಹಾಗೂ ಮಕ್ಕಳೊಂದಿಗೆ ಹಿಂದಿರುಗುತ್ತಿದ್ದ ವೇಳೆ, ಶನಿವಾರ ಮಧ್ಯರಾತ್ರಿ 12:45ರ ಸುಮಾರಿಗೆ ಈ ಘಟನೆ ನಡೆದಿದೆ. ತಂಝಿಲ್‌ಗೆ 21 ಗುಂಡುಗಳು ತಗಲಿದ್ದರೆ, ಅವರ ಪತ್ನಿಗೆ 4 ಗುಂಡುಗಳು ತಾಗಿವೆ.





