‘ಭಾರತ್ ಮಾತಾಕಿ ಜೈ’ ಅನ್ನಲಾರದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ: ಫಡ್ನವೀಸ್
ನಾಸಿಕ್, ಎ.3: ಭಾರತ ಮಾತೆಯನ್ನು ಹೊಗಳಲು ಬಯಸದವರಿಗೆ ಈ ದೇಶದಲ್ಲಿರುವ ಹಕ್ಕಿಲ್ಲವೆಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿನ್ನೆ ನಾಸಿಕ್‌ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ.
ಭಾರತದ ಅತಿ ದೊಡ್ಡ ಇಸ್ಲಾಮಿಕ್ ಸೆಮಿನರಿ, ದಾರುಲ್ ಉಲೂಂ ದೇವಬಂದ್, ಮುಸ್ಲಿಮರು ‘ಭಾರತ್ ಮಾತಾಕಿ ಜೈ’ ಅನ್ನಬಾರದೆಂದು ‘ಫತ್ವಾ’ ಹೊರಡಿಸಿದ ಮರುದಿನ ಫಡ್ನವೀಸರ ಈ ಹೇಳಿಕೆ ಹೊರಬಿದ್ದಿದೆ.
ನಾಸಿಕ್‌ನಲ್ಲಿ ಬಿಜೆಪಿ ಕಾರ್ಯಕರ್ತರ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಪ್ರತಿಯೊಬ್ಬನೂ ‘ಭಾರತ್ ಮಾತಾಕಿ ಜೈ’ ಹೇಳಲೇ ಬೇಕೆಂದು ಅಭಿಪ್ರಾಯಿಸುವ ಕೋಟ್ಯಂತರ ಜನರು ಈ ದೇಶದಲ್ಲಿದ್ದಾರೆ. ಭಾರತ ಮಾತೆಯನ್ನು ಹೊಗಳಲಾರದವರು ಈ ದೇಶದಲ್ಲಿ ಬದುಕುವ ಹಕ್ಕನ್ನು ಪಡೆದಿಲ್ಲ ಎಂದಿದ್ದಾರೆ.
ಶುಕ್ರವಾರ ಬಿಡುಗಡೆ ಮಾಡಿದ್ದ ಹೇಳಿಕೆಯೊಂದರಲ್ಲಿ ದೇವಬಂದ್, ಈ ವಿಷಯದ ಬಗ್ಗೆ ತಮಗೆ ಸಾವಿರಾರು ಪ್ರಶ್ನೆಗಳು ಬಂದಿವೆ. ಆದುದರಿಂದ ದಾರುಲ್ ಉಲೂಮಾ ದೇವಬಂದ್, ‘ಭಾರತ್ ಮಾತಾಕಿ ಜೈ’ ಇಸ್ಲಾಂಗೆ ಹೊಂದಿಕೆಯಾಗುವುದಿಲ್ಲ. ಆದುದರಿಂದ ತಾವದನ್ನು ಹೇಳುವುದಿಲ್ಲ. ಆದರೆ, ತಾವು ತಮ್ಮ ದೇಶವನ್ನು ಅಪಾರವಾಗಿ ಪ್ರೀತಿಸುತ್ತೇವೆ. ಆದುದರಿಂದ ತಾವು, ‘ಹಿಂದೂಸ್ಥಾನ್ ಜಿಂದಾಬಾದ್’ ಹಾಗೂ ‘ಮಾದ್ರೆ ವತನ್(ತಾಯ್ನೆಲ) ಗಳಂತಹ ಘೋಷಣೆಗಳನ್ನು ಕೂಗಬಹುದೆಂದು ಫತ್ವಾ ಹೊರಡಿಸಿದೆ ಎಂದು ಹೇಳಿತ್ತು.
ಕಳೆದ ತಿಂಗಳು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್, ಯುವಕರಿಗೆ ದೇಶವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲು ಕಲಿಸಬೇಕು ಎಂದಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ಅಸದುದ್ದೀನ್ ಉವೈಸಿ, ತನ್ನ ಕುತ್ತಿಗೆಗೆ ಚೂರಿಯಿಟ್ಟರೂ, ತಾನು ‘ಭಾರತ್ ಮಾತಾಕಿ ಜೈ’ ಎನ್ನಲಾರೆ. ಅದನ್ನು ಹೇಳಲೇಬೇಕೆಂದು ಸಂವಿಧಾನದಲ್ಲೆಲ್ಲೂ ಹೇಳಿಲ್ಲ ಎಂದಿದ್ದರು.





