ಐಸಿಸ್ ಪರರೆಂದು ಶಂಕಿಸಲಾಗಿದ್ದ ನಾಲ್ವರು ಭಾರತೀಯರು ಸಿರಿಯದಿಂದ ಬಿಡುಗಡೆ
ಹೊಸದಿಲ್ಲಿ, ಎ.3: ಸಿರಿಯದಿಂದ ನಾಲ್ವರು ಭಾರತೀಯರ ಬಿಡುಗಡೆ ಯನ್ನು ಸಾಧಿಸಲು ಭಾರತ ಯಶಸ್ವಿಯಾಗಿದೆಯೆಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ರವಿವಾರ ಮುಂಜಾನೆ ಟ್ವೀಟಿಸಿದ್ದಾರೆ. ಅವರು ಐಸಿಸ್ ಸೇರಲು ಬಂದಿದ್ದಾರೆಂದು ಭಾವಿಸಿ ಸಿರಿಯ ಸರಕಾರವು ಜನವರಿಯಲ್ಲಿ ಆ ನಾಲ್ವರನ್ನು ಬಂಧಿಸಿತ್ತು.
‘‘ಅರುಣ್‌ಕುಮಾರ್ ಸೈನಿ, ಸರ್ವಜಿತ್ ಸಿಂಗ್, ಕುಲದೀಪ್ ಸಿಂಗ್ ಹಾಗೂ ಜೋಗಾಸಿಂಜಗ್‌ರಿಗೆ ಸ್ವಾಗತ’’ ಎಂದು ಸುಷ್ಮಾ ಇಂದು ಮುಂಜಾನೆ ಮಾಡಿರುವ 4 ಟ್ವೀಟ್‌ಗಳಲ್ಲೊಂದರಲ್ಲಿ ಹೇಳಿದ್ದಾರೆ.
ಈ ವರ್ಷ ಜನವರಿಯಲ್ಲಿ ಸಿರಿಯದ ಉಪಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ಅವರ ಬಿಡುಗಡೆಗಾಗಿ ವಿನಂತಿ ಮಾಡಿದ್ದೆನು. ಸಿರಿಯಕ್ಕೆ ಕೃತಜ್ಞತೆಗಳು ಎಂದು ಸಚಿವೆ ಇನ್ನೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಜೋರ್ಡಾನ್‌ನಿಂದ ಸಿರಿಯಕ್ಕೆ ಗಡಿದಾಟಿ ಹೋಗಿದ್ದ ಈ ನಾಲ್ವರನ್ನು ಸಿರಿಯ ಸರಕಾರವು ದಮಾಸ್ಕಸ್‌ನಲ್ಲಿ ಬಂಧಿಸಿತ್ತು. ಅವರು ಐಸಿಸ್ ಪರ ಸಹಾನು ಭೂತಿಯುಳ್ಳವರೆಂದು ಅದು ಭಾವಿಸಿತ್ತು.
ಬಳಿಕ, ಅವರು ಅಧಿಕೃತ ದಾಖಲೆಗಳಿಲ್ಲದೆ ಪ್ರಯಾಣಿಸು ತ್ತಿರುವ ಕಾನೂನುಬಾಹಿರ ವಲಸೆಗಾರರೆಂದು ಸಿರಿಯ ತಿದ್ದುಪಡಿ ಮಾಡಿತ್ತು.
ಅರುಣ್‌ಕುಮಾರ್ ಸೈನಿ, ಸರ್ವಜಿತ್ ಸಿಂಗ್, ಕುಲದೀಪ್ ಸಿಂಗ್ ಹಾಗೂ ಜೋಗಾ ಸಿಂಗ್ ಅಲಿಯಾಸ್ ಜಗ್ಗಾ ಸಿಂಗ್ ಅಧಿಕೃತ ವೀಸಾ ಇಲ್ಲದೆ ನೌಕರಿ ಹುಡುಕಲು ಲೆಬನಾನ್‌ಗೆ ಹೋಗುವ ಮಾರ್ಗದಲ್ಲಿ ಜೋರ್ಡಾನ್‌ನಿಂದ ಸಿರಿಯವನ್ನು ಪ್ರವೇಶಿಸಿದ್ದರು. ಅವರನ್ನು ಸಿರಿಯದ ಅಧಿಕಾರಿಗಳು ಕಾನೂನುಬಾಹಿರ ವಲಸಿಗರೆಂದು ಬಂಧಿಸಿದೆಯೆಂದು ಫೆಬ್ರವರಿಯಲ್ಲಿ ವಿದೇಶಾಂಗ ಸಹಾಯಕ ಸಚಿವ ವಿ.ಕೆ. ಸಿಂಗ್ ಸಂಸತ್ತಿಗೆ ತಿಳಿಸಿದ್ದರು.
2011ರಲ್ಲಿ ಸಿರಿಯದಲ್ಲಿ ನಾಗರಿಕ ಯುದ್ಧ ಆರಂಭವಾದ ಬಳಿಕ ಭಾರತಕ್ಕೆ ಭೇಟಿ ನೀಡಿದ ಅತ್ಯಂತ ಹಿರಿಯ ಸಿರಿಯನ್ ಪ್ರತಿನಿಧಿ, ಉಪಪ್ರಧಾನಿ ವಾಲಿದ್-ಅಲ್ ಮವಲೆಂ, ಹೊಸದಿಲ್ಲಿಗೆ 3 ದಿನಗಳ ಪ್ರವಾಸಕ್ಕಾಗಿ ಬಂದವರು ಜ.13ರಂದು ಸುಷ್ಮಾರನ್ನು ಭೇಟಿಯಾಗಿದ್ದರು.
ಆ ಸಂದರ್ಭ ಅವರು, ನಾಲ್ವರು ಭಾರತೀಯರನ್ನು ಡಮಾಸ್ಕಸ್‌ನಲ್ಲಿ ಸಿರಿಯ ಬಂಧಿಸಿದೆ. ಆ ನಾಲ್ವರು ಯುವಕರು ಐಸಿಸ್‌ಗೆ ಸೇರುವ ಯೋಜನೆಯಲ್ಲಿದ್ದರು. ಅದಕ್ಕಾಗಿ ಜೋರ್ಡಾನ್‌ನಿಂದ ಸಿರಿಯಕ್ಕೆ ಪ್ರವೇಶಿಸಿದ್ದರೆಂದು ಹೊಸದಿಲ್ಲಿಯಲ್ಲಿ ಪತ್ರಕರ್ತರೊಡನೆ ಹೇಳಿದ್ದರು.
ಯುವಕರ ಬಿಡುಗಡೆ ಸಹಾಯ ನೀಡಿದ ಅಧಿಕಾರಿಗಳನ್ನು ಸುಷ್ಮಾ ಟ್ವೀಟ್‌ನಲ್ಲಿ ಶ್ಲಾಘಿಸಿದ್ದಾರೆ.





