ರಾಘವೇಶ್ವರ ಪ್ರಕರಣ: ಶೀಲಗೆಟ್ಟ ಸಂಬಂಧ ಬಹಿರಂಗ

ರಾಘವೇಶ್ವರ ಶ್ರೀ ಪ್ರಕರಣವನ್ನು ಈ ನಾಡಿನ ನ್ಯಾಯಾಲಯ ''ಶೀಲಗೆಟ್ಟ ಸಂಬಂಧ'' ಎಂದು ಘೋಷಿಸಿದೆ. ಸ್ವಾಮೀಜಿಯಂತಹ ಉನ್ನತ ಸ್ಥಾನದಲ್ಲಿರುವವರು ಶೀಲಗೆಡುವುದು 'ಅಪರಾಧ' ಅಲ್ಲವಾಗಿರುವುದರಿಂದ, ರಾಘವೇಶ್ವರರು ಆರೋಪ ಮುಕ್ತರಾಗಿದ್ದಾರೆ ಎಂದು ಅವರ ಭಕ್ತಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 'ಅತ್ಯಾಚಾರ ಆರೋಪ' ಹೊತ್ತು ಜೈಲು ಸೇರುವುದಕ್ಕಿಂತ, 'ಶೀಲಗೆಡುವ' ಶಿಕ್ಷೆಯನ್ನು ಹೊತ್ತು ಪೀಠದಲ್ಲಿ ಮುಂದುವರಿಯುವುದು ಅವರಿಗೆ ಹೆಮ್ಮೆಯ ವಿಷಯವೆನಿಸಿರಬಹುದು. ಮುಖ್ಯವಾಗಿ, ಈ ಶೀಲ ಎನ್ನುವುದು ಕೇವಲ ಹೆಣ್ಣಿಗಷ್ಟೇ ಸೀಮಿತಾದಂತಹ ಪದವಲ್ಲ. ಶೀಲ ದೇಹಕ್ಕಷ್ಟೇ ಸಂಬಂಧಪಡುವುದಿಲ್ಲ. ಅದು ವ್ಯಕ್ತಿಯ ಚಾರಿತ್ರಕ್ಕೆ ಸಂಬಂಧಪಟ್ಟದ್ದು. ಆದುದರಿಂದ ಇದು ಗಂಡಿಗೂ ಅನ್ವಯವಾಗುತ್ತದೆ. ಅಷ್ಟೇ ಅಲ್ಲ, ಶೀಲವೆನ್ನುವುದು ಬೇರೆ ಬೇರೆ ಸ್ಥಾನ-ಮಾನಗಳಿಗೂ ಅನ್ವಯವಾಗುತ್ತದೆ. ಒಬ್ಬ ಸ್ವಾಮೀಜಿಯ ಶೀಲ, ಒಂದು ನ್ಯಾಯವ್ಯವಸ್ಥೆಯ ಶೀಲ, ರಾಜಕಾರಣದ ಶೀಲ ಹೀಗೆ ಆಯಾಯ ಸ್ಥಾನಗಳೂ ಶೀಲವನ್ನು ತನ್ನದಾಗಿಸಿಕೊಂಡಿದ್ದು, ಅದು ಕೆಡದಂತೆ ನೋಡಿಕೊಳ್ಳುವುದು ಆ ಸ್ಥಾನವನ್ನು ಅಲಂಕರಿಸಿದವರ ಕರ್ತವ್ಯ.
ರಾಘವೇಶ್ವರ ಪ್ರಕರಣದಲ್ಲಿ, ಶೀಲ ಎನ್ನುವುದನ್ನು ನ್ಯಾಯಾಲಯ ಕೇವಲ ದೈಹಿಕ ಸಂಬಂಧಗಳಿಗೆ ಸಂಬಂಧಿಸಿ ಹೇಳಲು ಪ್ರಯತ್ನ ಮಾಡಿದೆ. ಮುಖ್ಯವಾಗಿ ಶೀಲದ ಹೆಸರಿನಲ್ಲಿ ಅದು ಹೆಣ್ಣನ್ನು ಮುಖ್ಯವಾಗಿ ಸಂತ್ರಸ್ತೆಯನ್ನು ಗುರಿಯಾಗಿಸಲು ಯತ್ನಿಸಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿರುವುದನ್ನು ಸಾರಾಸಗಟಾಗಿ ನ್ಯಾಯಾಲಯ ನಿರಾಕರಿಸಿದರೂ, ರಾಘವೇಶ್ವರ ಸ್ವಾಮೀಜಿ ಮತ್ತು ಮಹಿಳೆಯ ನಡುವೆ ಲೈಂಗಿಕ ಸಂಬಂಧವಿರುವುದನ್ನು ನಿಜ ಎಂದು ಒಪ್ಪಿಕೊಂಡಿದೆ. ಅದು ಶೀಲಗೆಟ್ಟ ಸಂಬಂಧವಾಗಿರುವುದರಿಂದ ರಾಘವೇಶ್ವರ ಶ್ರೀ ಕರಣದಲ್ಲಿ ಅವರು ನಿರಪರಾಧಿಗಳು ಎಂಬ ತೀರ್ಮಾನವೊಂದಕ್ಕೆ ನ್ಯಾಯಾಲಯ ಬಂದಿದೆ. ಹಲವು ತಿಂಗಳುಗಳಿಂದ ಈ ಅನೈತಿಕ ಸಂಬಂಧ ಮುಂದುವರಿದುಕೊಂಡು ಬಂದಿರುವುದರಿಂದ, ನ್ಯಾಯಾಲಯ ಇದನ್ನು ಅತ್ಯಾಚಾರ ಎಂದು ನಂಬಲು ಸಿದ್ಧವಿಲ್ಲ.
ಒಂದು ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ದೈಹಿಕ ಬಲ ಮಾತ್ರವಲ್ಲ, ತನ್ನ ಸುತ್ತಮುತ್ತಲಿರುವ ಧಾರ್ಮಿಕ, ರಾಜಕೀಯ ಬಲವನ್ನೂ ಬಳಸಿಕೊಳ್ಳಬಹುದು ಎನ್ನುವ ಅಂಶವನ್ನು ನ್ಯಾಯಾಲಯ ಉದ್ದೇಶಪೂರ್ವಕವಾಗಿ ಗಮನಕ್ಕೆ ತೆಗೆದುಕೊಂಡಿಲ್ಲ. ಈ ಶಕ್ತಿಗಳ ಮುಂದೆ ಹೆಣ್ಣಿನ ಧ್ವನಿ ಎಷ್ಟು ಕ್ಷೀಣವಾಗಿರುತ್ತದೆ ಮತ್ತು ಹೆಣ್ಣು ಎಷ್ಟು ಅಸಹಾಯಕಳಾಗಬೇಕಾಗುತ್ತದೆ ಎಂಬ ಬಗ್ಗೆ ನ್ಯಾಯಾಲಯ ಜಾಣ ಕುರುಡುತನವನ್ನು ಪ್ರದರ್ಶಿಸಿದೆ. ಹಾಗೆ ನೋಡಿದರೆ ರಾಘವೇಶ್ವರರ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದಿದವರು ಅಸಹಾಯಕ ಮಹಿಳೆಯಷ್ಟೇ ಅಲ್ಲ ಎನ್ನುವುದು ಈ ಪ್ರಕರಣದ ವಿಚಾರಣೆಯ ಇತಿಹಾಸ ನೋಡಿದರೆ ಬಹಿರಂಗವಾಗುತ್ತದೆ. ಈ ನಾಡಿನ ಪತ್ರಿಕೆಗಳು, ನ್ಯಾಯವ್ಯವಸ್ಥೆಯೊಳಗಿನ ಜನರು, ರಾಜಕಾರಣಿಗಳು ರಾಘವೇಶ್ವರರೊಂದಿಗೆ ಇಟ್ಟುಕೊಂಡ ಲಜ್ಜೆಗೆಟ್ಟ, ಶೀಲಗೆಟ್ಟ ಸಂಬಂಧಗಳನ್ನು ನಾವು ಗುರುತಿಸಬಹುದು. ರಾಘವೇಶ್ವರ ಸ್ವಾಮೀಜಿಯ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸುವ ಸಂದರ್ಭದಲ್ಲೇ ಸಂತ್ರಸ್ತೆ ಅದೆಷ್ಟು ಸಂಕಟಗಳನ್ನು, ಸಂಕಷ್ಟಗಳನ್ನು ಎದುರಿಸಬೇಕಾಯಿತು ಎನ್ನುವುದನ್ನು ಗಮನಿಸೋಣ.
ಆರೋಪಿಸಿದ ಸಂತ್ರಸ್ತೆಯೇ ಜೈಲು ಸೇರಬೇಕಾದಂತಹ ವಿಪರ್ಯಾಸವನ್ನು ನಾಡಿನ ಜನರು ನೋಡಬೇಕಾಯಿತು. ಅಷ್ಟೇ ಅಲ್ಲ, ಹೊರಗಿನ ತೀವ್ರ ಒತ್ತಡದ ಕಾರಣದಿಂದ, ಆಕೆಯ ಕುಟುಂಬದ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಯಿತು.ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಜನರು ಯಾರು ಎನ್ನುವುದನ್ನು ಬಹಿರಂಗಪಡಿಸಲು ನಮ್ಮ ಕಾನೂನು ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ರಾಘವೇಶ್ವರ ಸ್ವಾಮೀಜಿಯ ಜೊತೆಗೆ ಪೊಲೀಸರು ಶೀಲಗೆಟ್ಟ ಸಂಬಂಧವನ್ನು ಹೊಂದಿರುವುದಕ್ಕೆ ತನಿಖೆಯ ಕುರಿತು ದೂರು ದಾಖಲಿಸುವ ಸಂದರ್ಭದಲ್ಲಿ ಅವರ ನಡವಳಿಕೆಯೇ ಸಾಕ್ಷಿ.
ರಾಘವೇಶ್ವರ ಸ್ವಾಮೀಜಿಯ ವಿಚಾರಣೆ ಆಮೆಗತಿಯಲ್ಲಿ ನಡೆಯಿತು. ವಿಪರ್ಯಾಸವೆಂದರೆ, ಐದು ಜನ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದರು. ಅದರಲ್ಲಿ ನಾಲ್ವರು ನ್ಯಾಯಾಧೀಶರು ತಾವು ವಿಚಾರಣೆಯಿಂದ ಹಿಂದೆ ಸರಿದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನೇ ತಿಳಿಸಲಿಲ್ಲ. ನ್ಯಾಯವ್ಯವಸ್ಥೆ ಯಾವುದೇ ಖಾಸಗಿ ಸಂಸ್ಥೆಯಲ್ಲ. ಅದು ಜನರ ತೆರಿಗೆಯ ಹಣದಿಂದಲೇ ನಿಂತಿದೆ. ನ್ಯಾಯಾಧೀಶರು ತಮಗೆ ತೀರ್ಪು ನೀಡಲು ಇಷ್ಟವಿಲ್ಲದ ಪ್ರಕರಣದಿಂದ ಸಾರಾಸಗಟಾಗಿ ಹಿಂದೆ ಸರಿಯುವುದು, ಅಥವಾ ಪ್ರಕರಣದಲ್ಲಿ ವೈಯಕ್ತಿಕ ನಿಲುವು, ನಂಬಿಕೆಗಳನ್ನು ಜೋಡಿಸಿಕೊಳ್ಳುವುದು ನ್ಯಾಯವ್ಯವಸ್ಥೆಗೆ ಮಾಡುವ ಅವಮಾನ. ಈ ದೇಶದಲ್ಲಿ ಸ್ವಾಮೀಜಿಗಳಿಗೊಂದು, ಜನಸಾಮಾನ್ಯರಿಗೊಂದು ನ್ಯಾಯವಿಲ್ಲ. ಆದುದರಿಂದ, ರಾಘವೇಶ್ವರ ಸ್ವಾಮೀಜಿಯ ಅತ್ಯಾಚಾರ ಪ್ರಕರಣದಲ್ಲಿ ವೈಯಕ್ತಿಕವಾದ ನಿಲುವುಗಳನ್ನೆಲ್ಲ ಪಕ್ಕಕ್ಕಿಟ್ಟು ಅದನ್ನು ವಿಚಾರಣೆ ನಡೆಸುವುದು ನ್ಯಾಯಾಧೀಶರ ಕರ್ತವ್ಯವಾಗಿತ್ತು. ಆದರೆ ಅವರೇ ವಿಚಾರಣೆಗೆ ಹಿಂಜರಿಕೆ ವ್ಯಕ್ತಪಡಿಸುವ ಮೂಲಕ, ರಾಘವೇಶ್ವರರ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದಿರುವ ಇನ್ನಷ್ಟು ಜನರ ಮುಖಗಳು ಹೊರ ಬಿದ್ದವು.
ರಾಘವೇಶ್ವರ ಸ್ವಾಮೀಜಿ ಮತ್ತು ನಿತ್ಯಾನಂದ ಸ್ವಾಮೀಜಿಯ ಪ್ರಕರಣವನ್ನು ಜೊತೆಗಿಟ್ಟು ಚರ್ಚಿಸೋಣ. ನಿತ್ಯಾನಂದ ಸ್ವಾಮೀಜಿಯ ಮೇಲೆ ಮೂರನೆಯ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಯಿತು. ಅವರ ಪುರುಷತ್ವ ಪರೀಕ್ಷೆ ಮಾಡಲಾಯಿತು. ಸಾರ್ವಜನಿಕರು ಅವರ ಆಶ್ರಮದ ಮೇಲೆ ದಾಳಿ ನಡೆಸಿದರು. ಪತ್ರಿಕೆಗಳು, ಟಿವಿಗಳು ತಮಗೆ ತೋಚಿದ ಹಾಗೆ ಬರೆದವು, ಒದರಿದವು. ಅವರೊಂದಿಗೆ ಸಂಬಂಧ ಇಟ್ಟುಕೊಂಡ ಆರೋಪ ಹೊತ್ತ ರಂಜಿತಾರನ್ನೂ ಪತ್ರಿಕೆಗಳು ಬಿಡಲಿಲ್ಲ. ಆದರೆ ರಾಘವೇಶ್ವರ ಪ್ರಕರಣದಲ್ಲಿ ಮಾತ್ರ ಇದ್ಯಾವುದೂ ನಡೆಯಲಿಲ್ಲ. ಬದಲಿಗೆ ನ್ಯಾಯ ಬೇಡಿದ ಹೆಣ್ಣೇ ಇಲ್ಲಿ ನೂರಾರು ಸಂಕಟಗಳನ್ನು, ನೋವುಗಳನ್ನು ಎದುರಿಸಬೇಕಾಯಿತು. ಸ್ವಾಮೀಜಿಯ ಭಕ್ತರೂ ದೂರು ನೀಡಿದ ಹೆಣ್ಣನ್ನೇ ಅಸಹ್ಯವಾಗಿ ಆಡಿಕೊಂಡರು.
ಸರಿ. ನ್ಯಾಯಾಲಯ ಹೇಳಿದಂತೆ, ಸಂತ್ರಸ್ತೆ ಮತ್ತು ರಾಘವೇಶ್ವರ ಶ್ರೀ ಅವರ ನಡುವೆ ಶೀಲಗೆಟ್ಟ ಸಂಬಂಧ ಇದೆ ಎಂದುಕೊಳ್ಳೋಣ. ನ್ಯಾಯಾಲಯ ಪರೋಕ್ಷವಾಗಿ 'ಶೀಲಗೆಟ್ಟವನು' ಎಂದು ಕರೆದ ಸ್ವಾಮೀಜಿಯೊಬ್ಬ ಒಂದು ಸಮುದಾಯವನ್ನು ಮುನ್ನಡೆಸುವ ಸ್ಥಾನ ವಹಿಸಿಕೊಳ್ಳಲು ಎಷ್ಟರ ಮಟ್ಟಿಗೆ ಅರ್ಹನೆನಿಸಿಕೊಳ್ಳುತ್ತಾನೆ? ನ್ಯಾಯಾಲಯದಿಂದ ಶೀಲಗೆಟ್ಟ ಸಂಬಂಧ ಹೊಂದಿದ ವ್ಯಕ್ತಿಯಾಗಿ ಘೋಷಿಸಲ್ಪಟ್ಟ ರಾಘವೇಶ್ವರರು, ಸಮಾಜಕ್ಕೆ ಶೀಲವನ್ನು, ನೈತಿಕತೆಯನ್ನು ಯಾವ ಮುಖದಲ್ಲಿ ಬೋಧಿಸುತ್ತಾರೆ? ಇಂತಹ ಧಾರ್ಮಿಕ ವ್ಯಕ್ತಿತ್ವಗಳನ್ನು ಮುಂದಿಟ್ಟುಕೊಂಡು, ಹಿಂದೂ ಸಂಸ್ಕೃತಿಯನ್ನು ಉಳಿಸುತ್ತೇವೆ, ಬೆಳೆಸುತ್ತೇವೆ ಎಂದರೆ ಅದು ನಂಬುವ ಮಾತೇ?ಈ ತೀರ್ಪು ಹೊರಬಿದ್ದ ಬಳಿಕವಾದರೂ ರಾಘವೇಶ್ವರಶ್ರೀಗಳು ತಮ್ಮ ಸ್ಥಾನವನ್ನು ತ್ಯಜಿಸಬೇಕಾಗಿತ್ತು. ಆದರೆ ಅದೆಲ್ಲವನ್ನು ನಾವು ಲಜ್ಜೆ, ನಾಚಿಕೆ ಇತ್ಯಾದಿಗಳಿರುವ ಮನುಷ್ಯರಿಂದಷ್ಟೇ ನಿರೀಕ್ಷಿಸಬಹುದು.
ರಾಘವೇಶ್ವರ ಸ್ವಾಮೀಜಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ನ್ಯಾಯಾಲಯ ಎಲ್ಲೂ ಅಲ್ಲಗಳೆಯದೇ ಇರುವುದರಿಂದ, ಸಂತ್ರಸ್ತೆ ನ್ಯಾಯಕ್ಕೆ ತುಂಬಾ ಹತ್ತಿರದಲ್ಲಿದ್ದಾರೆ. ಸಂತ್ರಸ್ತೆಗೆ ಹೈಕೋರ್ಟ್‌ನಲ್ಲಿ ನ್ಯಾಯ ಕೇಳುವ ಹಕ್ಕು ಇದ್ದೇ ಇದೆ. ಆರೋಪಿ ಪ್ರಭಾವಿ ಸ್ಥಾನದಲ್ಲಿರುವುದರಿಂದ, ಸಂತ್ರಸ್ತೆ ಮೇಲ್ಮನವಿ ಸಲ್ಲಿಸಲು ಸಮಾಜದ ಎಲ್ಲ ಸಂಘಟಕರು, ಹೋರಾಟಗಾರರು ಬೆಂಬಲ ನೀಡುವ ಅಗತ್ಯವಿದೆ. ಜನಸಾಮಾನ್ಯರಿಗೊಂದು ನ್ಯಾಯ, ಸ್ವಾಮೀಜಿಗಳಿಗೆ, ರಾಜಕಾರಣಿಗಳಿಗೆ ಇನ್ನೊಂದು ನ್ಯಾಯ ಎಂಬಂತಾಗದೆ, ಸಂತ್ರಸ್ತೆಗೆ ಶೀಘ್ರ ನ್ಯಾಯ ಸಿಗಲಿ, ಆರೋಪಿ ಜೈಲು ಸೇರಲಿ ಎನ್ನುವುದು ಈ ನೆಲದ ಸಂಸ್ಕೃತಿಯ ಮೇಲೆ ನಂಬಿಕೆಯಿಟ್ಟ ಎಲ್ಲರ ಆಶಯವಾಗಿದೆ.







