ಕುಲಭೂಷಣ್ ಬಂಧನದ ಜೊತೆ ಇರಾನ್‌ಗೆ ನಂಟು ಕಲ್ಪಿಸಬೇಡಿ
ಮಾಧ್ಯಮಗಳಿಗೆ ಪಾಕ್ ಕಿವಿಮಾತು

ಇಸ್ಲಾಮಾಬಾದ್,ಎ.3: ಭಾರತೀಯ ಗೂಢಚಾರನೆಂದು ಆರೋಪಿಸಲಾದ, ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್ ಬಂಧನ ಪ್ರಕರಣದ ಜೊತೆ ಇರಾನ್‌ಗೆ ನಂಟು ಕಲ್ಪಿಸಬಾರದೆಂದು ಪಾಕಿಸ್ತಾನ ಸರಕಾರ ಇಂದು ತನ್ನ ದೇಶದ ಮಾಧ್ಯಮಗಳಿಗೆ ತಿಳಿಸಿದೆ. ಇಂತಹ ವರದಿಗಳಿಂದ ಪಾಕ್ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮವುಂಟಾಗುವ ಸಾಧ್ಯತೆಯಿದೆಯೆಂದು ಇರಾನ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಾಕ್ ಈ ಹೇಳಿಕೆ ನೀಡಿದೆ.
‘‘ಭಾರತೀಯ ಬೇಹುಗಾರಿಕಾ ಜಾಲದ ಚಟುವಟಿಕೆಗಳ ಜೊತೆಗೆ ಇರಾನ್‌ಗೆ ಯಾವುದೇ ರೀತಿಯ ಸಂಬಂಧವಿಲ್ಲ. ಪಾಕಿಸ್ತಾನ ಹಾಗೂ ಇರಾನ್ ಹಲವು ದಶಕಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಬಾಂಧವ್ಯಗಳನ್ನು ಹೊಂದಿವೆ ಹಾಗೂ ನಮ್ಮ ಸ್ನೇಹಕ್ಕೆ ಅಡ್ಡಬರಲು ಯಾರಿಗೂ ಸಾಧ್ಯವಿಲ್ಲ’ ಎಂದು ಪಾಕಿಸ್ತಾನದ ಗೃಹ ಸಚಿವ ನಿಸಾರ್ ಅಲಿ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಾಕಿಸ್ತಾನ-ಇರಾನ್‌ನ ‘ಸೋದರ’ ಬಾಂಧವ್ಯಗಳ ಬಗ್ಗೆ ವರದಿ ಮಾಡುವಾಗ ಜಾಗರೂಕತೆ ವಹಿಸಬೇಕೆಂದು ನಿಸಾರ್ ಪಾಕ್ ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.
‘‘ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರ ಇತ್ತೀಚಿನ ಪಾಕ್ ಭೇಟಿಯು ಫಲಪ್ರದವಾಗಿತ್ತು ಆದರೆ ಇರಾನ್ ಪಾಕ್ ವಿರುದ್ಧ ಕೆಲವು ನಿರ್ದಿಷ್ಟ ಚಟುವಟಿಕೆಗಳಲ್ಲಿ ತೊಡಗಿದೆಯೆಂಬ ಭಾವನೆಯನ್ನು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ’’ ಎಂದವರು ವಿಷಾದಿಸಿದರು. ಇರಾನ್ ಅಧ್ಯಕ್ಷರ ಪಾಕ್ ಭೇಟಿ ಸಕಾರಾತ್ಮಕವಾಗಿದ್ದ ಹೊರತಾಗಿಯೂ ಮಾಧ್ಯಮಗಳ ಕೆಲವು ನಿರ್ದಿಷ್ಟ ವರ್ಗವು ಇರಾನ್‌ನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿರುವ ಬಗ್ಗೆ ಇರಾನಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆಂದು ನಿಸಾರ್ ಅಲಿ ಖಾನ್ ಹೇಳಿದರು.
ಪಾಕ್ ಹಾಗೂ ಇರಾನ್ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಹಾಳುಗೆಡವಲು ಯತ್ನಿಸುತ್ತಿವೆಯೆಂದು ಅವರು ಆರೋಪಿಸಿದರು.
ಇರಾನ್‌ನಿಂದ ಬಲೂಚಿಸ್ತಾನವನ್ನು ಪ್ರವೇಶಿಸಿದ ಕುಲಭೂಷಣ್ ಯಾದವ್ ಬಗ್ಗೆ ಟೆಹರಾನ್‌ಗೆ ಅರಿವಿದ್ದಿರಬಹುದೆಂದು ಪಾಕ್‌ನ ಕೆಲವು ಮಾಧ್ಯಮ ವರದಿಗೆ ಇರಾನ್ ರಾಯಭಾರಿ ಕಚೇರಿಯು ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಇಂತಹ ವರದಿಗಳು ಉಭಯದೇಶಗಳ ಬಾಂಧವ್ಯಗಳ ಮೇಲೆ ನಕಾರಾತ್ಮಕ ಪರಿಣಾವುಂಟು ಮಾಡುವುದೆಂದು ಅದು ಎಚ್ಚರಿಕೆ ನೀಡಿತ್ತು.
ಇರಾನ್‌ನಲ್ಲಿ ಸಣ್ಣದೊಂದು ನೌಕಾ ಸಂಸ್ಥೆಯನ್ನು ನಡೆಸುತ್ತಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್‌ರನ್ನು ಕಳೆದ ತಿಂಗಳು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ಆತ ಭಾರತದ ಬೇಹುಗಾರಿಕಾ ಸಂಸ್ಥೆ ರಾ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು ಬಲೂಚಿಸ್ತಾನ ಹಾಗೂ ಲಾಹೋರ್‌ನಲ್ಲಿ ವಿಧ್ವಂಸಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದರೆಂದು ಪಾಕ್ ಭದ್ರತಾ ಸಂಸ್ಥೆಗಳ ಆಪಾದಿಸಿವೆ.







