ರಾತ್ರಿ 8ರ ನಂತರ ಎಟಿಎಂಗಳಿಗೆ ನಗದು ತುಂಬುವಂತಿಲ್ಲ

ಹೊಸದಿಲ್ಲಿ,ಎ.3: ನಗದು ಹಣವನ್ನು ಸಾಗಿಸುವ ವಾಹನಗಳ ಮೇಲೆ ದಾಳಿಯ ಘಟನೆಗಳಿಂದಾಗಿ ಕಳವಳಗೊಂಡಿರುವ ಸರಕಾರವು ನಗರ ಪ್ರದೇಶಗಳಲ್ಲಿನ ಎಟಿಎಮ್‌ಗಳಲ್ಲಿ ರಾತ್ರಿ ಎಂಟು ಗಂಟೆಯ ನಂತರ ಹಣವನ್ನು ತುಂಬಿಸದಂತೆ ಸೂಚಿಸಿದೆ. ಖಾಸಗಿ ನಗದು ಸಾಗಣೆ ವಾಹನಗಳು ಬ್ಯಾಂಕುಗಳಿಂದ ದಿನದ ಪೂರ್ವಾರ್ಧದಲ್ಲಿಯೇ ಹಣವನ್ನು ಸಂಗ್ರಹಿಸಬೇಕೆಂದು ಅದು ನಿರ್ದೇಶ ನೀಡಿದೆ.
ಈ ಗಡುವು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಐದು ಗಂಟೆ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಜೆ ಮೂರು ಗಂಟೆಯಾಗಿರುತ್ತದೆ. ಅಲ್ಲದೆ ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಸಿರುವ ವಿಶೇಷ ವಿನ್ಯಾಸದ ನಗದು ಸಾಗಣೆ ವ್ಯಾನ್‌ಗಳು ಪ್ರತಿ ಟ್ರಿಪ್‌ಗೆ ಐದು ಕೋ.ರೂ.ಗಿಂತ ಹೆಚ್ಚಿನ ನಗದನ್ನು ಸಾಗಿಸುವಂತಿಲ್ಲ.
ಪ್ರತಿ ವ್ಯಾನ್‌ನಲ್ಲಿ ಇಬ್ಬರು ಸಶಸ್ತ್ರ ಗಾರ್ಡ್‌ಗಳು ಮತ್ತು ಚಾಲಕ ದಾಳಿ ನಡೆದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಮತ್ತು ವಾಹನವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ತರಬೇತಿಯನ್ನು ಪಡೆದಿರಬೇಕು.
ದೇಶಾದ್ಯಂತ ಪ್ರತಿ ದಿನ ಸುಮಾರು 8,000 ಖಾಸಗಿ ವ್ಯಾನುಗಳು ಬ್ಯಾಂಕುಗಳು, ಕರೆನ್ಸಿ ಚೆಸ್ಟ್‌ಗಳು ಮತ್ತು ಎಟಿಎಮ್‌ಗಳ ನಡುವೆ ಸುಮಾರು 15,000 ಕೋ.ರೂ.ಗಳಷ್ಟು ನಗದು ಹಣವನ್ನು ಸಾಗಿಸುತ್ತವೆ. ಇದರ ಜೊತೆಗೆ ರಾತ್ರಿ ವೇಳೆ 5,000 ಕೋ.ರೂ. ಬ್ಯಾಂಕುಗಳ ಪರವಾಗಿ ಖಾಸಗಿ ಭದ್ರತಾ ಸಂಸ್ಥೆಗಳ ಸುಪರ್ದಿಯಲ್ಲಿರುತ್ತದೆ.
ನಗದು ಸಾಗಿಸುವ ವಾಹನಗಳು ದಾಳಿಗಳಿಗೆ ಸುಲಭದ ಗುರಿಗಳಾಗಿರುವುದರಿಂದ ಗೃಹ ಸಚಿವಾಲಯವು ಈ ನಿಯಮಗಳನ್ನು ರೂಪಿಸಿದೆ.







