ಪಲಮೂರು ವಿವಿಯಲ್ಲಿ ಎಬಿವಿಪಿಯಿಂದ ದಲಿತ ವಿದ್ಯಾರ್ಥಿಗಳ ಮೇಲೆ ಬರ್ಬರ ಹಲ್ಲೆ

ಪಲಮೂರು, ಎ.3: ತೆಲಂಗಾಣದ ಮಹಬೂಬ್‌ನಗರದ ಪಲಮೂರು ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿಯೊಬ್ಬನ ವಿರುದ್ಧ ಜಾತಿಯ ಕಾರಣಕ್ಕಾಗಿ ತಾರತಮ್ಯ ಮಾಡಿ ಅವಮಾನಿಸಿ, ಬಳಿಕ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಶ್ರೀನು ಎಂಬ ಈ ವಿದ್ಯಾರ್ಥಿ ಮೇಲ್ಜಾತಿಯ ಎಬಿವಿಪಿ ಕಾರ್ಯಕರ್ತನೊಬ್ಬನೊಂದಿಗೆ ಒಂದೇ ಕೊಠಡಿಯಲ್ಲಿದ್ದನು. ಆ ವಿದ್ಯಾರ್ಥಿ ತನ್ನನ್ನು ಹಾಗೂ ತನ್ನ ವಸ್ತುಗಳನ್ನು ಮುಟ್ಟದಂತೆ ಶ್ರೀನುಗೆ ತಾಕೀತು ಮಾಡಿದ್ದನು.
ದಲಿತ ವಿದ್ಯಾರ್ಥಿ ಈ ‘ಅಸ್ಪಶ್ಯತೆ ಪದ್ಧತಿಯ’ ಬಗ್ಗೆ ವಿದ್ಯಾರ್ಥಿ ನಿಲಯದ ವಾರ್ಡನ್‌ನಲ್ಲಿ ದೂರಿದಾಗ, ಅವರು ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಹುಜನ ವಿದ್ಯಾರ್ಥಿ ಒಕ್ಕೂಟದ(ಬಿಎಸ್‌ಎಫ್) ವಿದ್ಯಾರ್ಥಿಗಳು ಅದನ್ನು ಉನ್ನತ ಅಧಿಕಾರಿಗಳ ಬಳಿ ಒಯ್ದಾಗ ಅವರೂ ಉಪೇಕ್ಷಿಸಿದರು.
ಬಳಿಕ, ಬ್ರಾಹ್ಮಣ ಹಾಗೂ ಮೇಲ್ಜಾತಿಗಳ ಅಧಿಕಾರಿಗಳಿಂದ ಬೆಂಬಲಿತ ಎಬಿವಿಪಿ ವಿದ್ಯಾರ್ಥಿಗಳು ಶ್ರೀನುನ ಮೇಲೆ ದಾಳಿ ನಡೆಸಿದರು. ಆತನನ್ನು ಕಲ್ಲುಗಳಿಂದ ಗುದ್ದಿದರು. ಬಿಎಸ್‌ಎಫ್ ಅಧ್ಯಕ್ಷ ಪೃಥ್ವಿರಾಜು ಎಂಬವರು ಶ್ರೀನುನ ರಕ್ಷಣೆಗೆ ಧಾವಿಸಿದಾಗ ಎಬಿವಿಪಿ ವಿದ್ಯಾರ್ಥಿಗಳು ಇಬ್ಬರ ಮೇಲೂ ಕಲ್ಲುಗಳಿಂದ ಬರ್ಬರ ಹಲ್ಲೆ ನಡೆಸಿದರು.
ಶ್ರೀನು ಹಾಗೂ ರಾಜು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಲಮೂರಿನಲ್ಲಿ ಎಬಿವಿಪಿಯ ಬ್ರಾಹ್ಮಣ ಕಿಡಿಗೇಡಿಗಳು ತಮ್ಮ ಬಹುಜನ ಮಿತ್ರರ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸುತ್ತೇವೆ. ಆರೋಪಿಗಳ ವಿರುದ್ಧ ಆದಷ್ಟು ಬೇಗ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಬೇಕೆಂದು ಬಿಎಸ್‌ಎಫ್ ಹಾಗೂ ಎಚ್‌ಸಿಯು ಸಂಘಟನೆಗಳು ಆಗ್ರಹಿಸಿವೆ.







