ವಿದೇಶಿ ಪ್ರವಾಸಿಗರಿಗೆ ಸಂಸ್ಕೃತಿ, ಪರಂಪರೆಯ ಪರಿಚಯ !
ತಲೆಗೆ ಹೊಡೆದು, ಬಟ್ಟೆ ಹರಿದ ಕುಡುಕ ಗೂಂಡಾಗಳು

ಅಜ್ಮೀರ್ : ನಗರದ ಅಜಯ್‌ಪಾಲ್ ದೇವಸ್ಥಾನದ ಸಮೀಪ ಆಗಮಿಸಿದ್ದ ನಾಲ್ಕು ಮಂದಿ ವಿದೇಶಿ ಪ್ರವಾಸಿಗರಮೇಲೆ ಸ್ಥಳೀಯ ಗೂಂಡಾಗಳ ಗುಂಪೊಂದು ಹಲ್ಲೆಗೈದ ಘಟನೆ ಸೋಮವಾರ ಸಂಜೆ ನಡೆದಿದೆ. ಆರೋಪಿಗಳು ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು ಆಕೆಯ ಬಟ್ಟೆಗಳನ್ನು ಹರಿದು ಹಾಕಿದ್ದಾರೆಂದು ಹೇಳಲಾಗಿದೆ.
ದಾಳಿಗೊಳಗಾದ ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆ ಸ್ಪೇನ್ ಸಂಜಾತೆಯಾಗಿದ್ದರೆ, ಇನ್ನೊಬ್ಬಾಕೆ ಟರ್ಕಿಯ ನಾಗರಿಕಳಾಗಿದ್ದಾಳೆ. ಪುರುಷರಲ್ಲಿ ಒಬ್ಬ ಅಮೆರಿಕನ್ ಆಗಿದ್ದರೆ ಇನ್ನೊಬ್ಬನ ರಾಷ್ಟ್ರೀಯತೆ ತಿಳಿದು ಬಂದಿಲ್ಲ. ಸುಮಾರು 35ರಿಂದ 40 ವಯಸ್ಸಿನ ಅಸುಪಾಸಿನವರಾದ ವಿದೇಶಿ ದಂಪತಿಗಳು ಮೂರು ದಿನಗಳಿಂದ ಪುಷ್ಕರ್ ಹೊಟೇಲಿನಲ್ಲಿ ತಂಗಿದ್ದು ಸೋಮವಾರ ಅಪರಾಹ್ನ ಎರಡು ಬೈಕುಗಳನ್ನು ಬಾಡಿಗೆಗೆ ಪಡೆದು ಅರಾವಳಿ ಪರ್ವತ ಶ್ರೇಣಿ ಮತ್ತಿತರ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ದಂಪತಿಗಳು ಅಜಯ್‌ಪಾಲ್ ದೇವಸ್ಥಾನದ ಸಮೀಪ ಆಗಮಿಸಿದಾಗ ಅಲ್ಲಿ ಮದ್ಯದ ನಶೆಯಲ್ಲಿದ್ದ ನಾಲ್ಕೈದು ಗೂಂಡಾಗಳು ಅವರನ್ನು ಮಾತನಾಡಿಸಲು ಯತ್ನಿಸಿದ್ದು ಅವರು ನಿರಾಕರಿಸಿದಾಗ ಅವರನ್ನು ಬೆಂಬತ್ತಿ, ಮಹಿಳೆಯೊಬ್ಬಳ ಮೇಲೆ ದಾಳಿ ನಡೆಸಿದರು. ಇತರರು ಆಕೆಯನ್ನು ರಕ್ಷಿಸಲೆತ್ನಿಸಿದಾಗ ಅವರಲ್ಲೊಬ್ಬನ ತಲೆಗೆ ಕಲ್ಲಿನಿಂದ ಹೊಡೆದು ಗಂಭೀರ ಗಾಯಗೊಳಿಸಿದರೆನ್ನಲಾಗಿದೆ.
ಗಾಯಾಳು ವಿದೇಶಿ ದಂಪತಿಗಳು ಇಲ್ಲಿಯವರೆಗೆ ಯಾವುದೇ ದೂರು ನೀಡಿಲ್ಲವಾದರೂ ದೂರು ನೀಡುವಂತೆ ಅವರ ಮನವೊಲಿಸಲಾಗುತ್ತಿದೆಯೆಂದು ಎಸ್ಪಿಬಲಗ್ಗನ್ ಹೇಳಿದ್ದಾರೆ.





