ಉಪ್ಪಿನಂಗಡಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು - ಮುರಳೀಧರ

ಉಪ್ಪಿನಂಗಡಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಇದರಿಂದ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಸಾಧ್ಯ ಎಂದು ಶಾಂತಿನಗರ ಸರಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಮುರಳೀಧರ ತಿಳಿಸಿದರು. ಉಪ್ಪಿನಂಗಡಿಯ ವರ್ತಕರ ಸಂಘ ಹಾಗೂ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗ ಜಂಟಿ ಆಶ್ರಯದಲ್ಲಿ ಶಾಂತಿನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕರಕುಶಲ ತರಬೇತಿ ಶಿಬಿರ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಕುಶಲ ಚಟುವಟಿಕೆಯನ್ನು ವೃತ್ತಿಯನ್ನಾಗಿ ಅಥವಾ ಪ್ರವೃತ್ತಿಯನ್ನಾಗಿ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ಪಠ್ಯ ವಿಷಯದಲ್ಲಿ ಮಾತ್ರ ತೊಡಗಿಸಿಕೊಳ್ಳುವುದಕ್ಕಿಂತ ಇಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು ಆಗ ನಮ್ಮ ಅನುಭವ ಹೆಚ್ಚಾಗಲು ಸಾಧ್ಯ ಎಂದ ಅವರು, ಬೇಸಿಗೆ ರಜೆಯನ್ನು ಅನಗತ್ಯವಾಗಿ ಕಾಲಹರಣ ಮಾಡಿ ವ್ಯರ್ಥ ಮಾಡದೇ ಇಂತಹ ಶಿಬಿರಗಳಲ್ಲಿ ಭಾಗಹಿಸುವ ಮೂಲಕ ಜ್ಞಾನವೃದ್ಧಿಗೆ ಪ್ರಯತ್ನಿಸಬೇಕು ಎಂದರು.
ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತಾ ಮಾತನಾಡಿ, ಉಪ್ಪಿನಂಗಡಿ ವಲಯದ ವರ್ತಕರ ಸಂಘವು ಆರೋಗ್ಯ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಶ್ರಮಕ್ಕೆ ಬೆಲೆ ಬರಲು ಸಾಧ್ಯ ಎಂದರು. ವರ್ತಕರ ಸಂಘದ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಅವಕಾಶಕ್ಕಾಗಿ ಕಾಯುವುದಕ್ಕಿಂತ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಅತೀ ಮುಖ್ಯ. ನಾವು ಸಮಾಜದಲ್ಲಿ ಗುರುತಿಸಿಕೊಂಡವರಂತಾದಾಗ ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ವೇದಿಕೆಯಲ್ಲಿ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಪ್ರಾಂಶುಪಾಲೆ ಶ್ರೀಮತಿ ಮೇರಿ ಬಿ.ಸಿ., ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಕುಮಾರಿ ನವ್ಯ, ವರ್ತಕರ ಸಂಘದ ಮಾಜಿ ಅಧ್ಯಕ್ಷ ಯು.ಜಿ.ರಾಧಾ, ಝಕಾರಿಯಾ ಕೊಡಿಪ್ಪಾಡಿ ಉಪಸ್ಥಿತರಿದ್ದರು. ನಿವೃತ ಚಿತ್ರಕಲಾ ಶಿಕ್ಷಕ ಪುರುಷೋತ್ತಮ ಸಂಪನ್ಮೂಲ ವ್ಯಕ್ತಿಯಾಗಿ. ವಿದ್ಯಾರ್ಥಿನಿಯರಾದ ಪ್ರಜ್ಞಾ ಸ್ವಾಗತಿಸಿದರು. ಮಧುರಾ ವಂದಿಸಿದರು. ಆಶಾಲತಾ ಮತ್ತು ಫಾಯಿಝ ಬಾನು ಕಾರ್ಯಕ್ರಮ ನಿರೂಪಿಸಿದರು.







