ಕೃತಿಚೌರ್ಯದ ಸುಳಿಯಲ್ಲಿ ಹೈದರಾಬಾದ್ ವಿವಿ ಉಪಕುಲಪತಿ
ವಿಸಿ ಗೆ ಕಸಿವಿಸಿ

ಹೊಸದಿಲ್ಲಿ, ಎ. 5: ಹೈದರಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪಾರಾವ್ ಪೋಡಿಲೆ ಇತ್ತೀಚಿನ ದಿನಗಳಲ್ಲಿ ಎಲ್ಲ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ರೋಹಿತ್ ವೇಮುಲಾರ ಸಾವಿಗೆ ವಿಶ್ವವಿದ್ಯಾನಿಲಯದ ಪ್ರತಿಕ್ರಿಯೆಯ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಸದೆಬಡಿಯಲು ಪೊಲೀಸರನ್ನು ಬಳಸಿರುವುದಕ್ಕಾಗಿ ಅವರು ಟೀಕೆಗೊಳಗಾಗಿದ್ದರು. ಆ ಘಟನೆ ಓರ್ವ ಆಡಳಿತಗಾರನಾಗಿ ಅವರ ಸಾಮರ್ಥ್ಯವನ್ನು ಸಂಶಯಿಸುವಂತೆ ಮಾಡಿತ್ತು. ಈಗ ಅದಕ್ಕಿಂತಲೂ ದೊಡ್ಡ, ಅಂದರೆ ಅವರ ಶೈಕ್ಷಣಿಕ ಅರ್ಹತೆಯನ್ನೇ ಸಂದೇಹಿಸುವಂಥ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಅಪ್ಪಾರಾವ್ ಸಹಲೇಖಕರಾಗಿರುವ ಹಲವಾರು ವಿಜ್ಞಾನ ಲೇಖನಗಳು ಕೃತಿಚೌರ್ಯದ ಆರೋಪಗಳನ್ನು ಎದುರಿಸುತ್ತಿವೆ.
2007 ಮತ್ತು 2014ರ ನಡುವೆ ಪ್ರಕಟಗೊಂಡ ಮೂರು ಪ್ರಬಂಧಗಳಲ್ಲಿ ಕೃತಿಚೌರ್ಯವನ್ನು ಗುರುತಿಸಲಾಗಿದೆ.
‘Root colonization and Quorum Sensing are the Driving Forces of Plant Growth Promoting Rhizobacteria (PGPR) for Growth Promotion' ಎಂಬ ಪ್ರಬಂಧದಲ್ಲಿ ಆರು ಕೃತಿಚೌರ್ಯದ ವಾಕ್ಯಗಳು ಕಂಡುಬಂದಿವೆ. ಈ ಪ್ರಬಂಧ 2014ರಲ್ಲಿ ‘Proceedings of the Indian National Science Academy' ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಈ ಪ್ರಬಂಧದಲ್ಲಿ ಅಪ್ಪಾರಾವ್‌ರನ್ನು ಪ್ರಧಾನ ಹಾಗೂ corresponding author ಎಂಬುದಾಗಿ ಉಲ್ಲೇಖಿಸಲಾಗಿತ್ತು.
ಅವರ ಎರಡನೆ ಪ್ರಬಂಧ ‘Induced Defence in Plants: A Short Overview'- ಇದರಲ್ಲಿ ಒಂದು ಕೃತಿ ಚೌರ್ಯದ ಪ್ರಕರಣ ಪತ್ತೆಯಾಗಿದೆ. ಈ ಪ್ರಬಂಧ ‘Proceedings of the National Academy of Sciences, India' ಪತ್ರಿಕೆಯಲ್ಲಿ 2014ರಲ್ಲಿ ಪ್ರಕಟಗೊಂಡಿತ್ತು. ಇದರಲ್ಲಿ ಅಪ್ಪಾರಾವ್ ಮೂವರು ಲೇಖಕರ ಪೈಕಿ ಒಬ್ಬರು.
ಮೂರನೆ ಪ್ರಬಂಧದಲ್ಲಿ (ದಿನಾಂಕವಾರು ಮೊದಲನೆಯದು) ಒಂದು ವಾಕ್ಯವನ್ನು ಕೃತಿಚೌರ್ಯ ಮಾಡಲಾಗಿದೆ. ಹಾಗೂ ಅದನ್ನು 2010ರಲ್ಲಿ ಅವರ ಸಹಬರವಣಿಗೆಯ ಪ್ರಬಂಧದಲ್ಲಿ ಅದನ್ನು ಪುನರಾವರ್ತಿಸಲಾಗಿದೆ. ಆ ಪ್ರಬಂಧ 2007ರಲ್ಲಿ ‘Indian Journal of Microbiology'ಯಲ್ಲಿ ಪ್ರಕಟಗೊಂಡಿತ್ತು.
ಈ ಬಗ್ಗೆ ಅಪ್ಪಾರಾವ್‌ರನ್ನು ಸಂಪರ್ಕಿಸಿದಾಗ, ಎಲ್ಲ ಪ್ರಕರಣಗಳಲ್ಲಿ ಅವರ ಪ್ರತಿಕ್ರಿಯೆ ಒಂದೇ ರೀತಿಯಾಗಿತ್ತು: ‘‘ಅದು ನಮ್ಮ ಗುಂಪಿನ ಉದ್ದೇಶಪೂರ್ವಕ ಪ್ರಯತ್ನವಾಗಿರಲಿಲ್ಲ; ತಪ್ಪುಗಳಿಗೆ ನಾನು ಪೂರ್ಣ ಜವಾಬ್ದಾರಿಯನ್ನು ಹೊರುತ್ತೇನೆ; ನಾವು ಇತರರ ಮಾಹಿತಿಗಳನ್ನು ಕೃತಿಚೌರ್ಯ ಮಾಡಿದ್ದರೆ, ನಾವು ಪ್ರಬಂಧವನ್ನು ವಿಷಾದಪೂರ್ವಕವಾಗಿ ಹಿಂದಕ್ಕೆ ಪಡೆದುಕೊಳ್ಳುತ್ತೇವೆ. ಕೃತಿಯ ಒಂದು ಭಾಗಕ್ಕಾಗಿ ನೈಜ ಮೂಲವನ್ನು ಉಲ್ಲೇಖಿಸುವಲ್ಲಿ ನಾವು ತಪ್ಪಿದ್ದರೆ, ನಮ್ಮ ತಪ್ಪುಗಳಿಗಾಗಿ ನಾವು ಕ್ಷಮೆ ಕೋರುತ್ತೇವೆ’’.
ಇನ್ನು ಮುಂದೆ, ಕೃತಿಚೌರ್ಯವನ್ನು ಪತ್ತೆಹಚ್ಚುವ ಸಾಫ್ಟ್‌ವೇರನ್ನು ತಾನು ಬಳಸುವುದಾಗಿಯೂ ಅವರು ಹೇಳಿದರು.
ಆದಾಗ್ಯೂ, ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಸಲ್ಲಿಸಲು ಅನುಮೋದನೆ ನೀಡುವ ಮುನ್ನ ‘Turnitin' ಎಂಬ ಸಾಫ್ಟ್‌ವೇರನ್ನು ಬಳಸುವುದು ಕಡ್ಡಾಯ ಎಂಬುದಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಹೇಳುತ್ತದೆ.
ಇದನ್ನು ಅವರ ಗಮನಕ್ಕೆ ತಂದಾಗ, ಅವರು ಹೇಳಿದ್ದಿಷ್ಟು: ‘‘ಪ್ರಬಂಧಗಳನ್ನು ಸಲ್ಲಿಸುವ ಮುನ್ನ ಬಳಸಲು ‘Turnitin' ಈಗ ಲಭ್ಯವಿದೆ. ಆದರೆ, ನಮ್ಮ ಪ್ರಬಂಧಗಳ ಸಲ್ಲಿಕೆಯಾದಾಗ ಆ ಕ್ರಮವಿರಲಿಲ್ಲ’’.







