ಬರಲಿವೆ ಮಹಿಳೆಯರಿಗೆ ಸಣ್ಣ ಗಾತ್ರದ , ಆಕರ್ಷಕ ಬಣ್ಣಗಳ "ನಿರ್ಭೀಕ್" ರಿವಾಲ್ವರ್

ಕಾನ್ಪುರ್ , ಎ.5 : 2012ರ ದೆಹಲಿಯ ಬರ್ಬರ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಮಹಿಳೆಯರ ಆತ್ಮ ರಕ್ಷಣೆಗೆಂದೇ ತಯಾರಿಸಲಾದ ' ನಿರ್ಭೀಕ್' ರಿವಾಲ್ವರ್ ಈಗ ಇನ್ನಷ್ಟು ಸಣ್ಣ ಗಾತ್ರದಲ್ಲಿ , ವಿವಿಧ ಬಣ್ಣಗಳಲ್ಲಿ ಬರಲಿದೆ.
"ನಿರ್ಭಯ ಪ್ರಕರಣದ ಎರಡೂವರೆ ವರ್ಷಗಳ ಬಳಿಕ ಬಂದ ಈ ರಿವಾಲ್ವರ್ 750 ಗ್ರಾಂ ತೂಕವಿತ್ತು. ಇದರಿಂದ ಸಮಸ್ಯೆಯಾಗುತ್ತದೆ ಎಂದು ಮಹಿಳೆಯರು ದೂರಿದ್ದರು. ಬಳಿಕ ಅದನ್ನು 500 ಗ್ರಾಂ ಗೆ ಇಳಿಸಲಾಯಿತು. ಆದರೆ ಈಗ ತಜ್ಞರು ಅದನ್ನು ಇನ್ನಷ್ಟು ಕಡಿಮೆ ತೂಕಕ್ಕೆ ಇಳಿಸಿ ಮಹಿಳೆಯರು ಸುಲಭವಾಗಿ ಹ್ಯಾಂಡ್ ಬ್ಯಾಗ್ ನಲ್ಲಿ ಕೊಂಡೊಯ್ಯುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ " ಎಂದು ಕಾನ್ಪುರ್ ಫೀಲ್ಡ್ ಗನ್ ಫ್ಯಾಕ್ಟರಿಯ ಪ್ರಧಾನ ವ್ಯವಸ್ಥಾಪಕ ನರೇಂದ್ರ ಕುಮಾರ್ ಅವರು ಹೇಳಿದ್ದಾರೆ.
ಇಷ್ಟೇ ಅಲ್ಲ, ರಿವಾಲ್ವರ್ ಅನ್ನು ಮಹಿಳೆಯರಿಗೆ ಆಕರ್ಷಕವಾಗಿ ಕಾಣಿಸುವಂತೆ ಮಾಡಲಾಗುತ್ತಿದೆ. ಈಗ ಗರಿಷ್ಟ ಬೇಡಿಕೆ ಪಂಜಾಬ್ ಹಾಗು ದೆಹಲಿಯಿಂದ ಬರುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.
" ಮಹಿಳೆಯರು ಮಾತ್ರವಲ್ಲ, ಸಣ್ಣ ಗಾತ್ರ ಹಾಗು ಕಡಿಮೆ ತೂಕದ ಕಾರಣದಿಂದ ಪುರುಷರೂ ಇದರ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಸದ್ಯ ನಿರ್ಭೀಕ್ ಬೆಲೆ ರೂ. 1,22,000 ಇದೆ. ಇದರ ಮೇಲೆ ಇನ್ನಷ್ಟು ರಿಯಾಯಿತಿ ನೀಡಲು ಮದ್ದುಗುಂಡು ಕಾರ್ಖಾನೆ ಮಂಡಳಿಯನ್ನು ಕೇಳಲಾಗಿದೆ. ಅದಕ್ಕೆ ಅನುಮತಿ ಸಿಕ್ಕಿದ ಮೇಲೆ ರಿವಾಲ್ವರ್ ನ ಬಣ್ಣ, ಬೆಲೆ ಹಾಗು ತೂಕವನ್ನು ಪುನರ್ ಪರಿಶೀಲಿಸಲಾಗುವುದು" ಎಂದು ಕುಮಾರ್ ಹೇಳಿದ್ದಾರೆ.





