ಈರ್ವರು ಹೋರಾಟಗಾರರು, 3 ಮಂದಿ ಪತ್ರಕರ್ತರು ಮಾತ್ರ ಭಾಗಿ
‘ನೇತ್ರಾವತಿ ಉಳಿಸಿ, ಎತ್ತಿನಹೊಳೆ ವಿರೋಧಿಸಿ’ ಸಭೆ ರದ್ದು,
ಉಪ್ಪಿನಂಗಡಿ: ‘ನೇತ್ರಾವತಿ ಉಳಿಸಿ ಹೋರಾಟಗಾರ’ ಎಂದು ಹೇಳಿಕೊಂಡು ಆನಂದ ಗೌಡ ರಾಮಕುಂಜ ಎಂಬವರು "ನೇತ್ರಾವತಿ ಉಳಿಸಿ ಎತ್ತಿನ ಹೊಳೆ ವಿರೋಧಿಸಿ" ಪ್ರತಿಭಟನೆ ಹಮ್ಮಿಕೊಳ್ಳುವ ಸಲುವಾಗಿ ಉಪ್ಪಿನಂಗಡಿಯಲ್ಲಿ ಕರೆದ ಪೂರ್ವಭಾವಿ ಸಭೆಗೆ ಜನ ಬಾರದೆ ಸಭೆ ರದ್ದುಗೊಂಡ ಘಟನೆ ಎ. 5ರಂದು ನಡೆಯಿತು.
ಎತ್ತಿನ ಹೊಳೆ ಯೋಜನೆ ವಿರುದ್ಧ ಎಪ್ರಿಲ್ 12ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ, ಇದರ ಸಲುವಾಗಿ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗುವುದು, ಸಭೆಯಲ್ಲಿ ನೇತ್ರಾವತಿ ಉಳಿಸಿ ಹೋರಾಟಗಾರರು, ವಿವಿಧ ಸಂಘ ಸಂಸ್ಥೆ ಮುಖಂಡರು, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕರಪತ್ರ ಹಂಚಲಾಗಿತ್ತು, ಆದರೆ ಸಭೆಗೆ ಜನ ಬಾರದೆ ಸಭೆ ರದ್ದುಗೊಂಡಿದೆ. ಬೆಳಿಗ್ಗೆ 10 ಗಂಟೆಗೆ ಸಭೆ ಕರೆಯಲಾಗಿತ್ತು. ಆದರೆ ಸಭೆ ಕರೆದ ಆನಂದ ಗೌಡ ಮಾತ್ರ ಇದ್ದರು. ತುಸು ಹೊತ್ತಿನಲ್ಲಿ ಪುತ್ತೂರು ಪುರಂದರ ಭಟ್ ಸೇರಿಕೊಂಡರು. ಹೀಗೆ ಈರ್ವರು ಮಾತ್ರ ಸೇರಿದ್ದರು. "ನೇತ್ರಾವತಿ ನದಿ ತಿರುವು" ಗಂಭೀರ ವಿಷಯದ ಸಭೆ ಕಾರಣಕ್ಕಾಗಿ ಸೇರಿದ್ದ 3 ಜನ ಪತ್ರಕರ್ತರು ಸುಮಾರು 1 ತಾಸು 20 ನಿಮಿಷ ಕಾದು ಕುಳಿತರು ಆದರೆ ಸಭೆಗೆ ಬೇರೆ ಯಾರೊಬ್ಬರೂ ಬಾರದ ಕಾರಣ ಪತ್ರಕರ್ತರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಅವರ ದಾರಿ ನೋಡಿ ತೆರಳಿದರು. ತಾತ್ಕಾಲಿಕ ಮುಂದೂಡಿಕೆ: ಆನಂದ ಗೌಡ
ಇಂದು ಕರೆಯಲಾಗಿದ್ದ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಎಪ್ರಿಲ್ 12ರಂದು ನಿಗದಿ ಪಡಿಸಿದ್ದ ಪ್ರತಿಭಟನಾ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಡಾ. ನಿರಂಜನ ರೈ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ಸಂದರ್ಭದಲ್ಲಿ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಆನಂದ ಗೌಡ ರಾಮಕುಂಜ ಪತ್ರಿಕೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯ ಔಚಿತ್ಯವೇನು?:
ಎತ್ತಿನ ಹೊಳೆ ಯೋಜನೆ ವಿರುದ್ಧ ದ.ಕ. ಜಿಲ್ಲೆಯ ಜನತೆ ಆಕ್ರೋಶಿತರಾಗಿದ್ದಾರೆ. ಆಕ್ರೋಶದ ಕಿಡಿ ಹೊತ್ತಿದ್ದು ಉಪ್ಪಿನಂಗಡಿಯಿಂದಲೇ ಆಗಿರುತ್ತದೆ. ನೇತ್ರಾವತಿ ನದಿ ತಿರುವು ವಿರೋದಿ ಹೋರಾಟ ಸಮಿತಿ ವತಿಯಿಂದ ಡಾ.ನಿರಂಜನ ರೈ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಉಪ್ಪಿನಂಗಡಿಯಲ್ಲಿ ಈ ಹಿಂದೆ ನಡೆದಿತ್ತು. ಅದರಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಿಲ್ಲೆಯ ಜನತೆ ಪಕ್ಷ, ಜಾತಿ, ಧರ್ಮದ ಬೇಧವಿಲ್ಲದೆ ಸೇರಿ ಜೈಲು ಭರೋ ಚಳವಳಿ ನಡೆಸಿದ್ದರು. ಜೈಲ್ ಭರೋ ಕಾರ್ಯಕ್ರಮದ ಬಳಿಕವೂ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡುವುದೆಂದು ಹೋರಾಟ ಸಮಿತಿ ಆ ಹಿಂದೆಯೇ ತೀರ್ಮಾನ ಕೈಗೊಂಡಿತ್ತು. ಬಳಿಕ ಬಿಜೆಪಿಯ ನಳಿನ್ ಕುಮಾರ್ ಕೂಡಾ ಪಾದಯಾತ್ರೆ ನಡೆಸಿದ್ದರು. ಆದರೆ ಎಲ್ಲಾ ಕಾರ್ಯಕ್ರಮಗಳು ಕೇವಲ ಅವರವರ ಪ್ರಚಾರಕ್ಕೆ ಸೀಮಿತವಾಯಿತೇ ಹೊರತು. ನೇತ್ರಾವತಿ ನದಿ ತಿರುವು ತಡೆಗೆ ಯಾರೂ ಕೂಡಾ ಮುಂದಾಗಲಿಲ್ಲ. ಇದಕ್ಕಾಗಿ ಕಾನೂನು ಹೋರಾಟ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯಿಂದಲೂ ನಡೆಯಲಿಲ್ಲ. ಗ್ರಾಮ ಮಟ್ಟದಲ್ಲಿ ಸಮಿತಿಯೂ ಆಗಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಗೆ ವಿರೋಧವಿದ್ದರೂ ಯೋಜನೆ ತಡೆಗೆ, ನೇತ್ರಾವತಿ ನದಿಯ ಉಳಿವಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವವರು ಇಲ್ಲಿ ಯಾರು ಇಲ್ಲ ಎಂಬ ವಿಷಯ ಸರಕಾರದ ಗಮನಕ್ಕೂ ಬಂದಾಗಿದೆ. ಹಾಗಾಗಿ ಯಾವುದೇ ಅಡೆತಡೆಗಳಿಲ್ಲದೆ ಕಾಮಗಾರಿ ನಡೆಯುತ್ತಲೇ ಇದೆ. ಪರಿಸ್ಥಿತಿ ಹೀಗಿರುವಾಗ ಮತ್ತೊಮ್ಮೆ ಆರಂಭದ ರೀತಿಯಲ್ಲಿ ಇದೀಗ ಪೂರ್ವಭಾವಿ ಸಭೆಯ ಔಚಿತ್ಯ ಏನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.







