ಆದಿವಾಸಿಗಳ ಪ್ರತಿಭಟನೆಗೆ ಎಸ್‌ಡಿಪಿಐ ಬೆಂಬಲ
ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ
ಮಡಿಕೇರಿ, ಎ.5: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಡಕಟ್ಟು ಜನರು ಗಿರಿಜನ ಅಭಿವೃದ್ಧಿ ಇಲಾಖೆಯ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಬಲವನ್ನು ಸೂಚಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಅಡ್ಕಾರ್, ದೇಶದಲ್ಲಿ ದಲಿತರು ಹಾಗೂ ಮುಸಲ್ಮಾನರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಬುಡಕಟ್ಟು ಜನರ ನಿರ್ಲಕ್ಷ ಕೂಡ ದೌರ್ಜನ್ಯದ ಒಂದು ಭಾಗವಾಗಿದೆಯೆಂದು ಆರೋಪಿಸಿದರು. ಪಕ್ಷದ ಪ್ರಮುಖರು ದೇವರಪುರ ಹಾಡಿಗೆ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನರ ಹೀನಾಯ ಪರಿಸ್ಥಿತಿಯನ್ನು ಪ್ರತ್ಯಕ್ಷ ಅವಲೋಕಿಸಿದೆ. ವಯೋವೃದ್ಧ ನಿವಾಸಿಗಳು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದು, ಕನಿಷ್ಠ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯೂ ಇಲ್ಲಿ ಇಲ್ಲದಾಗಿದೆ. ಸ್ವಚ್ಛಭಾರತ ಅಭಿಯಾನದಡಿ ಕೋಟ್ಯಾಂತರ ರೂ. ಖರ್ಚು ಮಾಡಲಾಗುತ್ತಿದ್ದು, ನಗರ ಭಾಗದಲ್ಲಿ ಮಾತ್ರ ಸ್ವಚ್ಛತೆಯ ಶೋ ನಡೆಯುತ್ತಿದೆ. ಆದರೆ, ಹಾಡಿಯ ಜನರಿಗೆ ಕನಿಷ್ಠ ಶೌಚಾಲಯವನ್ನೂ ನೀಡದೆ ಕಡೆಗಣಿಸಲಾಗಿದೆ ಎಂದು ಅಬ್ದುಲ್ ಅಡ್ಕಾರ್ ಆರೋಪಿಸಿದರು.
ದೇವರ ಕಾಡಿನ ಹೆಸರಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಇದು ಖಂಡನೀಯ. ಭೂ ಮಾಲಕರು ನ್ಯಾಯಾಲಯದ ದಾವೆ ಹೂಡುವ ಮೂಲಕ ಗಿರಿಜನರ ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದಾರೆ. ಕಳೆದ 10 ವರ್ಷಗಳಿಂದೀಚೆಗೆ ಹಾಡಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಬ್ದುಲ್ ಅಡ್ಕಾರ್ ಆರೋಪಿಸಿದರು.
ತಕ್ಷಣ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಪ್ರತಿಭಟನಾ ನಿರತ ಬುಡಕಟ್ಟು ಜನರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಎಸ್‌ಡಿಪಿಐ ವತಿಯಿಂದ ಜಿಲ್ಲಾಧಿಕಾರಿಗಳ ಕಚೆೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಬುಡಕಟ್ಟು ಜನರ ಬೇಡಿಕೆಗಳ ಈಡೇರಿಕೆಗೆ ಕೆಲವು ಕಾನೂನಿನ ಅಡಚಣೆೆಗಳು ಎದುರಾಗಿರುವುದು ಕಂಡು ಬಂದಿದ್ದು, ಪಕ್ಷದ ವತಿಯಿಂದ ಕಾನೂನಿನ ನೆರವು ನೀಡಲಾಗುವುದೆಂದು ತಿಳಿಸಿದರು.
ನಗರಸಭಾ ಕಾಂಗ್ರೆಸ್ ಸದಸ್ಯರು ಜೋಕರ್ಸ್:
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹ್ಸಿನ್ ಮಾತನಾಡಿ, ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಟೀಕಿಸಿದರು. ಬಿಜೆಪಿ ಪಕ್ಷ ಕಾಂಗ್ರೆಸ್ ಮುಕ್ತ ಆಡಳಿತ ಎಂದು ಘೋಷಣೆ ಮಾಡುತ್ತಿರುವಂತೆಯೇ ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ನಗರಸಭಾ ಅಧ್ಯಕ್ಷರು ಬಿಜೆಪಿ ಪರ ವರ್ತಿಸುತ್ತಿದ್ದಾರೆ. ಮುಂದಿನ ಆಡಳಿತಾವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತಿದ್ದು, ಅಧ್ಯಕ್ಷರು ವಿರೋಧ ಪಕ್ಷದ ಸಲಹೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಶೀರ್ ಅಲಿ ಹಾಗೂ ಸದಸ್ಯ ನೂರುದ್ದೀನ್ ಉಪಸ್ಥಿತರಿದ್ದರು.







