ಸ್ಫೂರ್ತಿ ಉಚಿತ ಸೇವಾ ಆ್ಯಂಬುಲೆನ್ಸ್ ಲೋಕಾರ್ಪಣೆ

ಸೊರಬ,ಎ.5 : ದಂಡಾವತಿ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದರೆ ಇಂತಹ ಬರಗಾಲದ ಸಂದಭರ್ದಲ್ಲಿ ತಾಲೂಕಿನ ಜನತೆಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು ಎಂದು ಶಿಕಾರಿಪುರ ಶಾಸಕ ಬಿ.ವೈ. ರಾಘವೇಂದ್ರ ಅಭಿಪ್ರಾಯಿಸಿದರು. ಮಂಗಳವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಮಡಿವಾಳ ಮಾಚಿದೇವ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸ್ಫೂರ್ತಿ ಉಚಿತ ಸೇವಾ ಅಂಬ್ಯುಲೆನ್ಸ್ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದಭರ್ದಲ್ಲಿ ದಂಡಾವತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಂತ್ರಸ್ಥರಿಗೆ ಸೂಕ್ತ ಪರಿಹಾರವನ್ನು ನೀಡುವ ಉದ್ದೇಶವನ್ನು ಸಹ ಹೊಂದಿದ್ದರು. ದಂಡಾವತಿ ಹಾಗೂ ಕಚವಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದರೆ ತಾಲೂಕಿನ ರೈತರು ವಾರ್ಷಿಕವಾಗಿ ಎರಡು ಬೆಳೆಯನ್ನು ಸುಲಭವಾಗಿ ಪಡೆಯುತ್ತಿದ್ದರು ಜೊತೆಗೆ ಬರಗಾಲದ ದುಸ್ಥಿತಿಯನ್ನು ಎದುರಿಸುತ್ತಿರಲಿಲ್ಲ ಎಂದರು. ಆದರೇ, ರೈತರ ಪರವಾದ ಬೃಹತ್ ಯೋಜನೆಗೆ ಸ್ಥಳೀಯ ಶಾಸಕ ಸೇರಿದಂತೆ ಕೆಲವರು ಅಡ್ಡಗಾಲು ಹಾಕಿದ್ದರ ಪರಿಣಾಮ ರೈತರು ಇಂದಿನ ಬರಗಾಲದ ಸ್ಥಿತಿಯಲ್ಲಿ ಸಂಕಷ್ಟಕ್ಕೀಡಾಗುವಂತಾಗಿದೆ ಎಂದು ಆರೋಪಿಸಿದರು. ಸ್ಫೂರ್ತಿ ಅಂಬ್ಯುಲೆನ್ಸ್ ವಾಹನಗಳಿಗೆ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಬಸವನಗೌಡ ಆರ್. ಪಾಟೀಲ್ ಯತ್ನಾಳ್ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಡಿವಾಳ ಮಾಚಿದೇವ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್‌ನ ಅಧ್ಯಕ್ಷ ರಾಜು ಎಂ. ತಲ್ಲೂರು ವಹಿಸಿದ್ದರು. ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಹಿರೇಮಾಗಡಿ ಮಠದ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, ಮೂಡಿ ಮಠದ ಸದಾಶಿವ ಸ್ವಾಮೀಜಿ, ಗೊಗ್ಗೆಹಳ್ಳಿ ಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ಭಾರತೀಶೆಟ್ಟಿ, ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್, ಜಿ.ಪಂ. ಸದಸ್ಯ ಸತೀಶ್ ಎಂ. ಅರ್ಜುನಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಾವಲಿ ನಾಗರಾಜಗೌಡ, ಪ್ರಮುಖರಾದ ತಲ್ಲೂರು ಈಶ್ವರಪ್ಪ ನಾಯ್ಕಾ, ಗಜಾನನ ರಾವ್, ಸೋಮಸುಂದರ ಪಾಟೀಲ್, ಡಾ. ನಾಗೇಂದ್ರಪ್ಪ, ಈಶ್ವರ ಚೆನ್ನಪಟ್ಟಣ, ಎಂ.ಕೆ. ಯೋಗೇಶ್ ವಕೀಲ, ಅಂಗಡಿ ಚಂದ್ರಪ್ಪ, ತಡಗಣಿ ಮಂಜಣ್ಣ, ಮುತ್ತೇಶ್ ತಲ್ಲೂರು, ಹಿರಣ್ಯಪ್ಪ ಕುಂಬ್ರಿ, ಮತ್ತಿತರರು ಉಪಸ್ಥಿತರಿದ್ದರು.







