ಪಾಕ್ ಟ್ವೆಂಟಿ-20 ತಂಡದ ನಾಯಕರಾಗಿ ಸರ್ಫರಾಝ್

ಕರಾಚಿ, ಎ.5: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸರ್ಫರಾಝ್ ಅವರನ್ನು ಪಾಕಿಸ್ತಾನ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ.
ಭಾರತದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೂಪರ್-10 ಗ್ರೂಪ್ ಹಂತದಲ್ಲೇ ಸೋತು ನಿರ್ಗಮಿಸಿದ ಬಳಿಕ ತಂಡದ ನಾಯಕ ಶಾಹಿದ್ ಅಫ್ರಿದಿ ರಾಜೀನಾಮೆ ನೀಡಿದ್ದರು. ತೆರವಾಗಿರುವ ನಾಯಕನ ಸ್ಥಾನಕ್ಕೆ ಸರ್ಫರಾಝ್ ನೇಮಕಗೊಂಡಿದ್ಧಾರೆ.
28ರ ಹರೆಯದ ಸರ್ಫರಾಝ್ ಅವರು ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಟೂರ್ನಮೆಂಟ್‌ನಲ್ಲಿ ಕ್ವಿಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಫೈನಲ್ ತನಕ ನಾಯಕರಾಗಿ ಮುನ್ನಡೆಸಿದ್ದರು. ಸರ್ಫರಾಝ್ ಅವರನ್ನು ನಾಯಕರಾಗಿ ಆಯ್ಕೆ ಮಾಡುವುದು ನಿರೀಕ್ಷಿತವಾಗಿತ್ತು. ‘‘ ನಾನು ಇಂದು ಬೆಳಗ್ಗೆ ಸರ್ಫರಾಝ್ ಅವರಲ್ಲಿ ಮಾತನಾಡಿದೆ. ನೀವು ತಂಡದ ನಾಯಕತ್ವಕ್ಕೆ ಸಹಜ ಆಯ್ಕೆ ಎಂದು ಹೇಳಿದೆ. ಅವರ ನೇಮಕಾತಿ ನೇರ ಆಗಿದೆ, ಅವರಿಗೆ ನೂತನ ಜವಾಬ್ದಾರಿಯಲ್ಲಿ ಶುಭವಾಗಲಿ’’ ಎಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದಾರೆ.
ಸರ್ಫರಾಝ್ ಓರ್ವ ಅನುಭವಿ ಟ್ವೆಂಟಿ-20 ಕ್ರಿಕೆಟ್ ಆಟಗಾರ. ಪಾಕ್ ಪರ 21 ಟ್ವೆಂಟಿ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. 2 ಅರ್ಧಶತಕಗಳನ್ನು ಒಳಗೊಂಡ 291 ರನ್ ದಾಖಲಿಸಿದ್ದಾರೆ. ಔಟಾಗದೆ 76 ಅವರ ಗರಿಷ್ಠ ಸ್ಕೋರ್ ಆಗಿದೆ.





