ವಕ್ಫ್ ಆಸ್ತಿ ಕಬಳಿಕೆ ದೇಶದಲ್ಲಿಯೇ ದೊಡ್ಡ ಹಗರಣ: ಈಶ್ವರಪ್ಪ
ಶಿವಮೊಗ್ಗ, ಎ. 5: ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ವರದಿಯನ್ನು ರಾಜ್ಯ ಸರಕಾರವು ಸದನದಲ್ಲಿ ಮಂಡಿಸದೆ ರದ್ದುಗೊಳಿಸಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ್ದವಾದುದಾಗಿದೆ. ಈ ಮೂಲಕ ಭ್ರಷ್ಟಾಚಾರಿಗಳ ರಕ್ಷಣೆಗೆ ಸರಕಾರ ಮುಂದಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿಯವರು 2012 ರಲ್ಲಿಯೇ ವರದಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಿದ್ದಾರೆ. ಅಲ್ಲದೇ ಉಪಲೋಕಾಯುಕ್ತ ಆನಂದ್‌ರವರು ಇದರ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ಮಾ. 28 ಕ್ಕೆ ರಾಜ್ಯ ಸರಕಾರಕ್ಕೆ ಅವರು ಈ ವರದಿ ಕೊಟ್ಟಿದ್ದು. ಆದರೆ ರಾಜ್ಯ ಸರಕಾರ ಮಾ. 29 ರಂದು ಈ ವರದಿಯನ್ನೇ ರದ್ದು ಮಾಡಿದೆ. ಇದರ ಹಿಂದಿನ ಉದ್ದೇಶ ಭ್ರಷ್ಟಾಚಾರಿಗಳ ರಕ್ಷಣೆಯೇ ಆಗಿದೆ ಎಂದು ದೂರಿದ್ದಾರೆ. ಭ್ರಷ್ಟಾಚಾರದ ಮತ್ತು ಭ್ರಷ್ಟರ ರಕ್ಷಣೆಗಾಗಿ ರಾಜ್ಯ ಸರಕಾರ ಈ ವರದಿಯನ್ನು ಮಂಡಿಸುತ್ತಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.
ಅಲ್ಪಸಂಖ್ಯಾತ ಆಯೋಗದ ಆಯುಕ್ತರಾಗಿದ್ದ ಅತೀಕ್ ಅಹಮ್ಮದ್ ಅವರು ಆರೋಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿ ಮಂಡನೆಗೆ ವಿಧಾನಪರಿಷತ್‌ನಲ್ಲಿ ಸಭಾಪತಿ ರೂಲಿಂಗ್ ನೀಡಿದ್ದರೂ, ಮಂಡಿಸದೇ ಮೊಂಡತನವನ್ನು ಸರಕಾರ ಪ್ರದರ್ಶಿಸಿದೆ ಎಂದರು.
ಆರೋಪಿಗಳ ಪಟ್ಟಿಯನ್ನು ಲೋಕಸಭಾ ಸದಸ್ಯ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಕೇಂದ್ರ ಸಚಿವ ಜಾಫರ್ ಷರೀಪ್, ರಹ್ಮಾನ್ ಖಾನ್, ಸಚಿವ ರೋಷನ್‌ಬೇಗ್, ಶಾಸಕರಾದ ತನ್ವೀರ್ ಸೇಠ್, ಹ್ಯಾರಿಸ್ ಮೊದಲಾದವರ ಹೆಸರಿದೆ. ಇವರೆಲ್ಲರೂ ಸೇರಿ ಸುಮಾರು 57 ಸಾವಿರ ಎಕರೆಯಷ್ಟು ವಕ್ಫ್ ಸಮಿತಿಯ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರ ವೌಲ್ಯ 15 ಲಕ್ಷ ಕೋಟಿಯಷ್ಟು ಎಂದು ವಿವರಿಸಿದರು.
ರಾಜ್ಯಪಾಲರಿಗೆ ಬಿಜೆಪಿ ಮುಖಂಡರು ಸರಕಾರ ವರದಿ ಮಂಡನೆ ಮಾಡದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ್ದರ ಮೇರೆಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ವಿವರಣೆ ಕೇಳಿದ್ದರು. ಆದರೆ ಮುಖ್ಯಮಂತ್ರಿ ನೀಡಿದ ಉತ್ತರ ತನಗೆ ಸಮಾಧಾನ ತಂದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಠಿಯಾಗಿದೆ. ಮುಸ್ಲಿಮರು ಕಾಂಗ್ರೆಸ್ ಸರಕಾರದ ವಿರುದ್ಧ ಜಾಗೃತಗೊಳ್ಳಬೇಕು. ಇದು ದೇಶದಲ್ಲಿಯೇ ಅತಿದೊಡ್ಡ ಹಗರಣವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಜಾಗೃತರಾಗಬೇಕು ಎಂದರು.







