ಅನ್ನದಾತರ ಬಗ್ಗೆ ನಿರ್ಲಕ್ಷ ಸಲ್ಲದು: ಸಚಿವ ಸಿದ್ದೇಶ್ವರ್
ರೈತ ಸಮ್ಮೇಳನ, ಅರಿವು ಕಾರ್ಯಕ್ರಮ

ದಾವಣಗೆರೆ, ಎ. 5: ದೇಹಕ್ಕೆ ರಕ್ತ ಎಷ್ಟು ಮುಖ್ಯವೋ, ಹಾಗೆಯೇ ಪ್ರತಿಯೊಬ್ಬರ ಜೀವನಕ್ಕೂ ಹಾಗೂ ಪ್ರಪಂಚ ಉಳಿಯುವು ದಕ್ಕೂ ರೈತರೇ ಮುಖ್ಯ. ಆದ್ದರಿಂದ ಅನ್ನದಾತನ ಬಗ್ಗೆ ನಿರ್ಲಕ್ಷ ಸಲ್ಲದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ. ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಫಸಲ ವಿಮೆ ಯೋಜನೆ ಅಂಗವಾಗಿ ಆಯೋಜಿಸಿದ್ದ ರೈತ ಸಮ್ಮೇಳನ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೊಲ ಗದ್ದೆಗಳಿಗೆ ನೀರು, 24x7 ವಿದ್ಯುತ್, ರಸ್ತೆ, ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ಹಾಗೂ ಕೃಷಿ ಮಾರುಕಟ್ಟೆ ಕಲ್ಪಿಸುವುದು ಸರಕಾರದ ಮುಖ್ಯ ಕರ್ತವ್ಯವಾಗಿದೆ ಎಂದರು.
ಹಿಂದೆ ರೈತರು ಬಳಸಲಾಗುತ್ತಿದ್ದ ಯೂರಿಯಾ ಗೊಬ್ಬರವನ್ನು ಹಾಲು, ಕೆಮಿಕಲ್‌ಗಳಿಗೆ ಬಳಸಲಾಗುತ್ತಿತ್ತು ಎಂದ ಅವರು, ನೀಮ್ ಕೋಟೆಡ್ ಯೂರಿಯಾ ದಿಂದ ಪ್ರತಿವರ್ಷ ದೇಶದಲ್ಲಿ 310 ಮೆಟ್ರಿಕ್ ಟನ್ ಯೂರಿಯಾ ಬಳಕೆಯಾಗುತ್ತಿದೆ. 80 ಮೆಟ್ರಿಕ್ ಟನ್ ಸರಾಸರಿ ಆಮದು ಮಾಡಿಕೊಳ್ಳಲಾಗುತ್ತಿದೆ. 2015-16ನೆ ಸಾಲಿ ನಲ್ಲಿ 245 ಮೆಟ್ರಿಕ್ ಟನ್ ಉತ್ಪಾದಿಸಿ ಸ್ವಾವಲಂಬನೆ ಮೆರೆಯುತ್ತಿದ್ದೇವೆ. ಈಗಾಗಲೇ ಮುಚ್ಚಲ್ಪಟ್ಟಿರುವ 4 ಯೂರಿಯಾ ಗೊಬ್ಬರ ಉತ್ಪಾದನಾ ಘಟಕಗಳನ್ನು ಪುನಶ್ಚೇತನಗೊಳಿಸಿ ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತದೆ ಎಂದು ತಿಳಿಸಿದರು.
ರೈತರ ವಿಮೆ ಕಂತುಗಳನ್ನು ಮುಂಗಾರು ಇತರ ಬೆಳೆಗಳಿಗೆ ಶೇ. 2ರಷ್ಟು ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಶೇ. 5ಷ್ಟು ಮತ್ತು ಹಿಂಗಾರು ಇತರ ಬೆಳೆ ಗಳಿಗೆ ಶೇ. 1.5ರಷ್ಟು ವಾಣಿಜ್ಯ ಬೆಳೆಗಳಿಗೆ ಶೇ. 5ರಷ್ಟು ನೀಡಲಾಗುತ್ತದೆ. ಈ ಯೋಜನೆ ಗಳನ್ನು ಬೆಳೆ ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿರುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಎಲ್ಲಾ ವರ್ಗದ ರೈತರಿಗೂ ಪಾವತಿಸಬೇಕಾದ ವಿಮಾ ಕಂತಿ ನಲ್ಲಿ ಸಮನಾಗಿ ರಿಯಾಯಿತಿ ನೀಡುತ್ತದೆ ಎಂದರು. ಬಾಕಿ ಕಂತಿನ ಹೊರೆಯನ್ನು ಅದು ಶೇ. 90ಗಿಂತಲೂ ಅಧಿಕವಾಗಿದ್ದರೂ ಸರಕಾರವೇ ಭರ್ತಿ ಮಾಡುತ್ತದೆ. ಅಹಾರ ಬೆಳೆಗಳು, ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳಿಗಾಗಿ ಒಂದು ವರ್ತಮಾನಕ್ಕೆೆ ಒಂದೇ ಕಂತು ದರವಿರುತ್ತದೆ. ಈ ಮೊದಲು ಬೇರೆ ಬೇರೆ ಜಿಲ್ಲೆಗೆ ಮತ್ತು ಬೆಳೆಗೆ ಜಾರಿಯಲ್ಲಿದ್ದ ಬೇರೆ ಬೇರೆ ಕಂತು ದರ ರದ್ದುಪಡಿಸಲಾಗಿದೆ. ಖಾರಿಫ್‌ಗಾಗಿ ಶೇ. 2 ಮತ್ತು ರಾಬಿಗಾಗಿ ಶೇ. 1.5 ಆಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕೂಂದುರು ಹನುಮಂತಪ್ಪ, ಎಂ.ಕೆ. ರೇಣುಕಾಚಾರ್ಯ, ಡಾ. ಶ್ರೀನಾಥ್ ದೀಕ್ಷಿತ್, ಡಾ.ಟಿ.ಎನ್. ದೇವರಾಜ್, ಪಿ.ಸಿ. ಗಂಗಾಧರಪ್ಪ, ಸದಾಶಿವ, ಟಿ.ಆರ್. ವೇದಮೂರ್ತಿ, ಡಾ. ರಾಘವೇಂದ್ರ ಪ್ರಸಾದ್, ಡಾ.ಎಚ್.ಎಸ್. ಜಯಣ್ಣ, ಡಾ. ಉಮೇಶ್, ಬಿ.ಒ. ಮಲ್ಲಿಕಾರ್ಜುನ್, ಎಂ.ಜಿ. ಬಸವನಗೌಡ, ಧನಂಜಯ್, ಡಾ. ಕುಬೇಂದ್ರಪ್ಪ, ಎಸ್. ಬಸವರಾಜ್, ಕಲ್ಲೇರುದ್ರೇಶಪ್ಪ ಉಪಸ್ಥಿತರಿದ್ದರು.







