‘ಜಗಜೀವನ್‌ರಾಮ್ ನ್ಯಾಯ, ನೀತಿ, ಸಹಿಷ್ಣುತೆಯ ನೇತಾರ’

ಮೂಡಿಗೆರೆ, ಎ.5: ತತ್ವ ಮತ್ತು ಸಿದ್ಧಾಂತಕ್ಕೆ ಪೆಟ್ಟು ಬಿದ್ದಾಗ ಸಿಡಿದೆದ್ದು ನ್ಯಾಯ, ನೀತಿ, ಸಹಿಷ್ಣುತೆ ಕಾಪಾಡಿದ ಮಹಾನ್ ನೇತಾರ ಜಗಜೀವನ್ ರಾಮ್ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಅವರು ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್‌ರವರ 109ನೆ ಜಯಂತಿಯಲ್ಲಿ ಮಾತನಾಡಿ. ಬಾಬು ಜಗಜೀವನ್ ರಾಮ್ ಅವರು ಕಾರ್ಮಿಕ ನಾಯಕನಾಗಿ ಕಾರ್ಮಿಕರಿಗೆ ಶಾಸನಬದ್ಧ ನ್ಯಾಯ ಒದಗಿಸಿ ರಾಜಕಾರಣ ಸೇರಿದರು ಎಂದು ತಿಳಿಸಿದರು.
ಶಾಸಕ ಬಿ.ಬಿ.ನಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತ ಸಮುದಾಯವನ್ನು ಮುಖ್ಯಮಂತ್ರಿ ಮಾಡಲು ಇಂದಿನವರೆಗೆ ಸಾಧ್ಯವಾಗದೇ ಇರುವುದು ದುರಂತ ಎಂದರು.
ಭಾರತದ ರಾಷ್ಟ್ರಪತಿಯನ್ನಾಗಿ ದಲಿತರೊಬ್ಬರನ್ನು ನೇಮಿಸಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಆದರೆ ಜಾತಿ ವ್ಯವಸ್ಥೆಯಿಂದಾಗಿ ದಲಿತರು ಕೀಳು ಎಂಬ ಭಾವನೆ ಇರುವುದರಿಂದ ಅಂತಹ ಸ್ಥಾನಕ್ಕೆ ದಲಿತ ವರ್ಗ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು. ಈ ಸಂದರ್ಭದಲ್ಲಿ ಬಾಬು ಜಗಜೀವನ್ ರಾಮ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ವೇದಿಕೆಯಲ್ಲಿ ಎಂಎಲ್‌ಸಿ ಎಂ.ಕೆ.ಪ್ರಾಣೇಶ್, ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ, ತಾಪಂ ಸದಸ್ಯ ರಂಜನ್ ಅಜಿತ್‌ಕುಮಾರ್, ಕೆ.ಸಿ.ರತನ್, ಸವಿತಾ ರಮೇಶ್, ಭಾರತಿ, ಹಳೇ ಮೂಡಿಗೆರೆ ಗ್ರಾಪಂ ಅಧ್ಯಕ್ಷೆ ಶಬಾನ, ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ, ಬಿಎಸ್‌ಪಿ ಮುಖಂಡ ಯು.ಬಿ.ಮಂಜಯ್ಯ, ಲೋಕವಳ್ಳಿ ರಮೇಶ್, ಛಲವಾದಿ ಮಹಾಸಭಾ ಅಧ್ಯಕ್ಷ ಯು.ಆರ್.ರುದ್ರಯ್ಯ, ನಿವೃತ್ತ ಶಿಕ್ಷಕ ನಂಜುಂಡ, ಇಒ.ರುದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಧನಂಜಯ, ಕ್ರೀಡಾಧಿಕಾರಿ ಶ್ರೀನಿವಾಸ್, ಬಿಇಒ ಕೊಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.







