ಚಿಕ್ಕಮಗಳೂರು-ಹಾಸನ ಚತುಷ್ಪಥ ಹೆದ್ದಾರಿಗೆ ಅಗತ್ಯ ಕ್ರಮ: ಸಿಟಿ.ರವಿ

ಚಿಕ್ಕಮಗಳೂರು, ಎ.5: ಚಿಕ್ಕಮಗಳೂರಿನಿಂದ ಬಿಳಿಕೆರೆಯವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿಟಿ.ರವಿ ತಿಳಿಸಿದ್ದಾರೆ.
ಅವರು ನಗರ ಹೊರವಲಯದ ಹಿರೇಮಗಳೂರು ಬಳಿ ಅಭಿವೃದ್ಧಿ ಪಡಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು. ಚಿಕ್ಕಮಗಳೂರಿನಿಂದ ಹಾಸನದವರೆಗೂ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಡಿಪಿಆರ್ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೇಂದ್ರ ಸಾರಿಗೆ ಸಚಿವ ನಿತಿನ್‌ಗಡ್ಕರಿಯವರು ಕರ್ನಾಟಕಕ್ಕೆ ಬಂದಾಗ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆ ಮಾಡಿ ನಾಲ್ಕು ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವುದಾಗಿ ಹೇಳಿದರು ಇದರಲ್ಲಿ ಚಿಕ್ಕಮಗಳೂರು ಸೇರಿದೆ ಎಂದರು.
ಹೆದ್ದಾರಿಗಳು ರಾಷ್ಟ್ರದ ಅಭಿವೃದ್ಧಿಯನ್ನು ಸಾರುತ್ತವೆ ಎಂಬುದಕ್ಕೆ ಬಿಜೆಪಿ ಸರಕಾರ ಬದ್ಧವಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದ ಸಂದಭರ್ದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿಯ ಕಲ್ಪನೆ ಕೊಟ್ಟಿದ್ದರು. ಈಗ ದೇಶದ ಉದ್ದಗಲಕ್ಕೂ ದೊಡ್ಡ ಪ್ರಮಾಣದಲ್ಲಿ ಹೆದ್ದಾರಿ ಅಭಿವೃದ್ಧಿಪಡಿಸುವ ಕಾರ್ಯವಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಕಿ.ಮೀ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ನಿತಿನ್‌ಗಡ್ಕರಿ ಒಪ್ಪಿಗೆ ನೀಡಿದ್ದಾರೆ ಎಂದರು.
ಕಡೂರು, ಚಿಕ್ಕಮಗಳೂರು, ಮೂಡಿಗೆರೆ ರಸ್ತೆ ಅಭಿವೃದ್ಧಿ ಡಿಪಿಆರ್ ಹಂತದಲ್ಲಿದ್ದು ಪ್ರಸ್ತಾವನೆ ಕೇಂದ್ರಕ್ಕೆ ಹೋದ ಮೇಲೆ ಸಂಸದರೊಂದಿಗೆ ತೆರಳಿ ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಲೋಕಪ್ಪಗೌಡ, ಪ್ರದೀಪ್, ಮತ್ತಿತರರು ಉಪಸ್ಥಿತರಿದ್ದರು.







