ಎಮ್ಮೆದೊಡ್ಡಿ: ಗ್ರಾಪಂ ಕಚೇರಿ ಎದುರು ಕೊರಚರಹಟ್ಟಿ ಗ್ರಾಮಸ್ಥರ ಪ್ರತಿಭಟನೆ

ಕಡೂರು, ಎ.5: ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ಮೊದಲು ನೀರು ಕೊಡಿ ಎಂದು ತಾಲೂಕಿನ ಎಮ್ಮೆದೊಡ್ಡಿ ಗ್ರಾಪಂ ವ್ಯಾಪ್ತಿಯ ಕೊರಚರಹಟ್ಟಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಖಾಲಿ ಕೊಡ ಹಾಗೂ ಪೊರಕೆಯೊಂದಿಗೆ ಗ್ರಾಪಂ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ರಸ್ತೆಗೆ ಎಸೆದು ಪ್ರತಿಭಟನೆ ನಡೆಸಿದರು.
ಕಳೆದ ತಿಂಗಳಿನಿಂದ ನೀರಿಲ್ಲದೆ, ಕುಡಿಯಲು ಯೋಗ್ಯವಲ್ಲದ ಕೆರೆಯ ನೀರನ್ನು ಕುಡಿಯುತ್ತಿದ್ದೇವೆ. ಗ್ರಾಮದಲ್ಲಿರುವ ಬೋರ್‌ವೆಲ್‌ನಲ್ಲಿ ಸಾಕಷ್ಟು ನೀರಿದೆ ಆದರೆ ಕೈ ಪಂಪ್ ಹಾಕಿಸಿ ಕೊಡಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪಿಡಿಒಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನಕಾರಿಯಾಗಿಲ್ಲ ಎಂದು ಗ್ರಾಮದ ಮುಖಂಡ ರಾಜಣ್ಣ ದೂರಿದರು.
ಅಭಿವೃದ್ಧಿ ಅಧಿಕಾರಿ ಗ್ರಾಪಂ ನಲ್ಲಿ ಬೋರ್‌ವೆಲ್ ರಿಪೇರಿಗೆ ಹಣವಿಲ್ಲ. ಕೈಪಂಪ್ ರಿಪೇರಿಯ ಸಿಬ್ಬಂದಿ ಯಾರು ಇಲ್ಲ ಎಂಬ ಸಬೂಬನ್ನು ಹೇಳುತ್ತಾರೆ. ಪಂಚಾಯತ್‌ಗೆ 22 ಗ್ರಾಮಗಳು ಒಳಗೊಂಡಿದ್ದರೂ ಪಂಚಾಯತ್ ಕಚೇರಿಗೆ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಆಗಮಿಸದೇ ಕಡೂರು ಪಟ್ಟಣದಲ್ಲೇ ಕಾಲಹರಣ ಮಾಡುತ್ತಾರೆ ಎಂದು ಕೊರಚರಹಟ್ಟಿ ಗ್ರಾಮಸ್ಥರು ಆರೋಪಿಸಿದರು.
ಗ್ರಾಪಂ ನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರುಗಳು ನೆಪ ಮಾತ್ರಕ್ಕೆ ಎಂಬಂತಾಗಿದೆ. ಇವರು ಅಧಿಕಾರಕ್ಕೆ ಬಂದು ಇಷ್ಟು ದಿನ ಕಳೆದರೂ ಯಾವುದೇ ಸಾಮಾನ್ಯ ಸಭೆೆಗಳನ್ನಾಗಲಿ ಅಥವಾ ಗ್ರಾಮಸಭೆ ಮತ್ತು ವಾರ್ಡ್ ಸಭೆೆಗಳನ್ನು ನಡೆಸಿಲ್ಲ. ನೀರಿನ ಸಮಸ್ಯೆಯನ್ನು ಅಧ್ಯಕ್ಷರಲ್ಲಿ ವಿಚಾರಿಸಿದರೆ ನಿಮ್ಮ ಗ್ರಾಮದ ಜನ ಮತ ನೀಡಿಲ್ಲ ಆದ್ದರಿಂದ ನೀರು ಕೇಳಲೇ ಬೇಡಿ ಎಂಬ ಉಢಾಪೆ ಉತ್ತರ ನೀಡುತ್ತಾರೆ. ಕುಡಿಯುವ ನೀರಿಗೂ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮದ ಮುಖಂಡ ರಾಜಣ್ಣ ಪ್ರಶ್ನಿಸಿದರು.
ಕೆರೆಯ ನೀರನ್ನು ಕುಡಿಯುವುತ್ತಿರುವುದರಿಂದ ಇತ್ತೀಚೆಗೆ ಹತ್ತಾರು ಮಕ್ಕಳು ಅಸ್ವಸ್ಥಗೊಂಡಿದ್ದ ಉದಾಹರಣೆಗಳಿದ್ದು, ಗ್ರಾಪಂ ಯಾವುದೇ ಅಧಿಕಾರಿ ಗ್ರಾಮದಲ್ಲಿರುವ ನೀರಿನ ತೊಟ್ಟಿಯನ್ನು ಶುಚಿಗೊಳಿಸದೆ ನಿರ್ಲಕ್ಷ್ಯ ತುಳಿಯುತ್ತಿದ್ದಾರೆ ಇದರಿಂದ ಬೇಸತ್ತು ಪ್ರತಿಭಟನೆಗೆ ಮುಂದಾಗಿದ್ದೇವೆ, ತಮಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪಟ್ಟು ಹಿಡಿದರು.
ಕಚೇರಿಗೆ ಧಾವಿಸಿದ ಪಿಡಿಒ ನಾಳೆಯೇ ಬೋರ್‌ವೆಲ್
ರಿಪೇರಿ ಮಾಡಿಸುತ್ತೇನೆ. ಕೆಟ್ಟು ಹೋಗಿರುವ ಮೋಟಾರ್‌ನ್ನು ರಿಪೇರಿಗೆ ಮಾಡಿಸಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಗ್ರಾಮಗಳಿಗೆ ತೆರಳಿದರು. ಈ ಸಂದರ್ಭದಲ್ಲಿ ಕಡೂರು ಪೊಲೀಸ್ ಎಎಸ್‌ಐಆರ್. ಲೀಲಾವತಿ ಮತ್ತು ಸತೀಶ್‌ಕುಮಾರ್ ಪ್ರತಿಭಟನೆಯನ್ನು ಹಿಂಪಡೆಯುವಂತೆ ಗ್ರಾಮಸ್ಥರನ್ನು ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷೆ ಪುಷ್ಪರಾಜಣ್ಣ, ರೇಣುಕಾ, ಹಾಲೇಶ್, ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.







