ಮಂಗಳೂರು ವಿವಿಯಲ್ಲಿ ಯಶಸ್ವಿ ರಕ್ತದಾನ ಶಿಬಿರ

ಮಂಗಳೂರು, ಎ.5: ಜೀವ ಉಳಿಸುವ ರಕ್ತದಾನ ಶ್ರೇಷ್ಠದಾನವಾಗಿದ್ದು, ಪ್ರತಿಯೊ ಬ್ಬರು ಸ್ವ ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಡಾ.ಸುಶಿಲ್ ಜತನ್ನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಮಂಗಳೂರು ವಿಶ್ವ ವಿದ್ಯಾನಿಲಯ ರಕ್ತದಾನಿಗಳ ಗುಂಪು ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಹಯೋಗದಲ್ಲಿ 4ನೆ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಮಂಗಳೂರು ವಿವಿ ರಕ್ತದಾನಿಗಳ ಗುಂಪು ಇದರ ಸಂಯೋಜಕರಾದ ಪ್ರೋ.ಜಿ.ಪಿ. ಶಿವರಾಂ ಮಾತನಾಡಿ ರಕ್ತದಾನ ಒಂದು ಜೀವವನ್ನು ಕಾಪಾಡುವುದರಿಂದ ರಕ್ತದಾನ ಸರ್ವಶ್ರೇಷ್ಠ. ಮತ್ತೊಬ್ಬರಿಗೆ ನಮ್ಮ ರಕ್ತ ಕೊಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ರಕ್ತ ಹೆಚ್ಚೆಚ್ಚು ಕೊಟ್ಟಷ್ಟೂ ಅಧಿಕ ರಕ್ತದ ಕಣಗಳು ನಮ್ಮಲ್ಲಿ ಉತ್ಪಾದನೆಯಾಗುತ್ತದೆ. ವಿದ್ಯಾರ್ಥಿಗಳು ರಕ್ತದಾನ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಶಿಬಿರದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಸಚಿವರಾದ ಪ್ರೋ.ಟಿ.ಡಿ ಕೆಂಪರಾಜು ವಹಿಸಿದ್ದರು. ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೋ.ವಹೀದಾ ಸುಲ್ತಾನ, ಲೇಡಿಗೋಶನ್‌ಆಸ್ಪತ್ರೆ ವೈದ್ಯರು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.







