ಬಿಹಾರವೀಗ ಪಾನ ನಿಷೇಧಿತ ರಾಜ್ಯ

ಪಾಟ್ನಾ,ಎ.5: ಬಿಹಾರವು ಮಂಗಳವಾರದಿಂದ ಸಂಪೂರ್ಣ ಪಾನ ನಿಷೇಧಿತ ರಾಜ್ಯವಾಗಿದೆ. ಭಾರತ ನಿರ್ಮಿತ ವಿದೇಶಿ ಮದ್ಯ(ಐಎಂಎಫ್‌ಎಲ್) ಸೇರಿದಂತೆ ಎಲ್ಲ ಬಗೆಯ ಮದ್ಯ ಮಾರಾಟ ಮತ್ತು ಸೇವನೆಯನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆಯೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಪುಟ ಸಭೆಯ ಬಳಿಕ ಪ್ರಕಟಿಸಿದರು.
ಬಾರ್ ಮತ್ತು ರೆಸ್ಟೋರಂಟ್‌ಗಳು ಸೇರಿದಂತೆ ಬಿಹಾರದಾದ್ಯಂತ ಮದ್ಯ ಸೇವನೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಹಾರ ಸರಕಾರವು ಈ ವರ್ಷದ ಎಪ್ರಿಲ್ 1ರಂದು ಗ್ರಾಮೀಣ ಪ್ರದೇಶಗಳಲ್ಲಿ ದೇಸಿ ಮದ್ಯದ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು, ಆದರೆ ಪಟ್ಟಣಗಳು ಮತ್ತು ನಗರಗಳಲ್ಲಿ ಐಎಂಎಫ್‌ಎಲ್ ಮಾರಾಟಕ್ಕೆ ಅವಕಾಶ ನೀಡಿತ್ತು.
ಆದರೆ ಕೇವಲ ನಾಲ್ಕೇ ದಿನಗಳ ಅವಧಿಯಲ್ಲಿ ಪಟ್ನಾ ಮತ್ತು ಇತರ ಪಟ್ಟಣಗಳಲ್ಲಿ ಜನರು....ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸರಕಾರದ ನಿರ್ಧಾರಕ್ಕೆ ಭಾರೀ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ಯದ ವಿರುದ್ಧ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ನಮಗೆ ಮನದಟ್ಟಾಗಿರುವುದರಿಂದ ಇದೀಗ ಸಂಪೂರ್ಣ ಪಾನನಿಷೇಧಕ್ಕೆ ನಾವು ನಿರ್ಧರಿಸಿದ್ದೇವೆ ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಆದರೆ ಸೇನೆಯು ಮದ್ಯ ಮಾರಾಟ ಮತ್ತು ಬಳಕೆಯ ಬಗ್ಗೆ ತನ್ನದೇ ಆದ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವುದರಿಂದ ಸೇನೆಯ ದಂಡುಪ್ರದೇಶಗಳು ನಿಷೇಧದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದರು.
ಇತ್ತೀಚಿಗೆ ವಿವಾದವನ್ನು ಸೃಷ್ಟಿಸಿರುವ ಶೇಂದಿ ಕುರಿತಂತೆ ಕುಮಾರ್ ಅವರು,ನೀರಾದ ಬಳಕೆಗೆ ಅವಕಾಶವಿರುವ ಆದರೆ ಶೇಂದಿ ಸೇವನೆಗೆ ಅವಕಾಶವಿರದ 1991ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಶೇಂದಿ ತಯಾರಕರು ಮತ್ತು ಮಾರಾಟಗಾರರ ಹಿತಾಸಕ್ತಿ ರಕ್ಷಣೆಯ ದೃಷ್ಟಿಯಿಂದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಅದರ ನಿಷೇಧವನ್ನು ವಿರೋಧಿಸಿದ್ದರು.
ಸೂರ್ಯೋದಯದ ಮುನ್ನ ಸೇವಿಸುವ ನೀರಾಕ್ಕೆ ಸರಕಾರವು ಅವಕಾಶ ನೀಡುತ್ತದೆ, ಆದರೆ ನಶೆಯೇರಿಸುವ ಶೇಂದಿಗೆ ಅವಕಾಶವಿಲ್ಲ ಎಂದು ಕುಮಾರ್ ತಿಳಿಸಿದರು.
ಸಂಪೂರ್ಣ ಪಾನನಿಷೇಧದ ಬಳಿಕ ರಾಜ್ಯದಲ್ಲಿಯ ಮದ್ಯ ತಯಾರಿಕೆ ಕಂಪೆನಿಗಳ ಗತಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಅವು ಮದ್ಯ ತಯಾರಿಕೆಯನ್ನು ಮುಂದುವರಿಸಬಹುದು,ಆದರೆ ಅದನ್ನು ರಾಜ್ಯದೊಳಗೆ ಮಾರಾಟ ಮಾಡುವಂತಿಲ್ಲ ಎಂದರು. ಸಂಪೂರ್ಣ ಪಾನನಿಷೇಧ ನಿರ್ಧಾರವನ್ನು ಸ್ವಾಗತಿಸಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ ಕುಮಾರ ಮೋದಿ ಅವರು, ರಾಜ್ಯ ಸರಕಾರವು ಕೊನೆಗೂ ಪ್ರತಿಪಕ್ಷದ ಒತ್ತಡಕ್ಕೆ ಮಣಿದಿದೆ ಎಂದಿದ್ದಾರೆ.





