ಭಾರತ ಮಾತೆಯ ಬೆನ್ನಿಗಿರಿದ ಬಿಜೆಪಿ: ಕೇಜ್ರಿವಾಲ್

ಹೊಸದಿಲ್ಲಿ, ಎ.5: ಪಠಾಣ್ ಕೋಟ್ ವಾಯು ನೆಲೆಯ ಮೇಲಿನ ಮಾರಕ ಭಯೋತ್ಪಾದನಾ ದಾಳಿಯನ್ನು ‘ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ’ ಭಾರತವೇ ನಡೆಸಿದೆಯೆಂಬ ಪಾಕಿಸ್ತಾನದ ತನಿಖೆ ತಂಡವು ತೀರ್ಮಾನಿಸಿದೆಯೆಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪ್ರಧಾನಿ ದೇಶವನ್ನು ವಂಚಿಸಿದ್ದಾರೆಂದು ಇಂದು ಟ್ವೀಟ್ ಮಾಡಿದ್ದಾರೆ. ಕಳೆದ ವಾರ, ಎಎಪಿ ಹಾಗೂ ಕಾಂಗ್ರೆಸ್‌ಗಳ ಭಾರೀ ಪ್ರತಿಭಟನೆಯ ನಡುವೆಯೇ ಜನವರಿ ಆರಂಭದಲ್ಲಿ ಗಡಿಯಾಚೆಗಿನ 6 ಮಂದಿ ಭಯೋತ್ಪಾದಕರು ದಾಳಿ ನಡೆಸಿದ್ದ ಪಠಾಣ್ ಕೋಟ್ ವಾಯು ನೆಲೆಗೆ ಭೇಟಿ ನೀಡಲು ಐವರು ಪಾಕಿಸ್ತಾನಿ ಅಧಿಕಾರಿಗಳಿಗೆ ಅವಕಾಶ ಮಾಡಲಾಗಿತ್ತು. 80 ತಾಸುಗಳ ಕಾಲ ಭದ್ರತಾ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದರು ಹಾಗೂ 7 ಮಂದಿ ಯೋಧರು ಹುತಾತ್ಮರಾಗಿದ್ದರು.
ಪಾಕಿಸ್ತಾನಿ ಅಧಿಕಾರಿಗಳಿಗೆ ಸಾಕ್ಷ ಪರಿಶೀಲನೆ ಹಾಗೂ ಸಂಗ್ರಹದ ಕೆಲಸ ಒಪ್ಪಿಸಲಾಗಿತ್ತು. ಒಬ್ಬ ಪಾಕಿಸ್ತಾನದ ಐಎಸ್‌ಐ ಅಧಿಕಾರಿಯೂ ಇದ್ದ ಆ ತಂಡಕ್ಕೆ ವಾಯುನೆಲೆಗೆ ಪ್ರವೇಶ ನೀಡಬಾರದೆಂದು ವಿಪಕ್ಷಗಳು ಆಗ್ರಹಿಸಿದ್ದವು. ಪಾಕಿಸ್ತಾನ ನಡೆಸಿರುವ ಇಷ್ಟೊಂದು ಭಯೋತ್ಪಾದಕ ದಾಳಿಗಳಿಗೆ ಐಎಸ್‌ಐ ಕಾರಣವೆಂದು ಭಾರತ ದೂರುತ್ತಿರುವಾಗ ಅದರ ಸದಸ್ಯನೊಬ್ಬನಿಗೆ ಬಿಗು ಭದ್ರತೆಯ ಪ್ರದೇಶಕ್ಕೆ ಭೇಟಿಯ ಅವಕಾಶವನ್ನು ಹೇಗೆ ನೀಡಲು ಸಾಧ್ಯವೆಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರು.
ಪಾಕಿಸ್ತಾನದ ತನಿಖೆ ತಂಡವು ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ಪಠಾಣ್ ಕೋಟ್ ದಾಳಿಕಾರರು ಗಡಿಯಾಚೆಯಿಂದ ಬಂದವರೆಂದು ಸಾಬೀತುಪಡಿಸಲು ಭಾರತ ವಿಫಲವಾಗಿದೆಯೆಂದು ಹೇಳಲಾಗಿದೆಯೆಂದು ಸ್ಥಳೀಯ ನ್ಯೂಸ್ ವೆಬ್‌ಸೈಟ್ ಒಂದು ವರದಿ ಮಾಡಿತ್ತು.
ಪಾಕಿಸ್ತಾನವು ಅಧಿಕೃತವಾಗಿ ಹಂಚಿಕೊಂಡ ಮಾಹಿತಿಯ ಬಗ್ಗೆ ಮಾತ್ರ ತಾವು ಪ್ರತಿಕ್ರಿಯೆ ನೀಡುತ್ತೇವೆಂದು ಸರಕಾರದ ಮೂಲಗಳು ಹೇಳಿವೆ. ಆದರೆ, ಸೋರಿಕೆಯಾಗಿರುವ ಮಾಹಿತಿಯು ಪ್ರಧಾನಿಯನ್ನು ಸಂಘರ್ಷ ಎದುರಿಸುವಂತೆ ಮಾಡಿವೆ.
ಒಂದು ಕಡೆಯಿಂದ ಅವರು ‘ಭಾರತ್ ಮಾತಾಕಿ ಜೈ’ ಎನ್ನುತ್ತಾರೆ. ಇನ್ನೊಂದು ಕಡೆಯಿಂದ ಐಎಸ್‌ಐಯನ್ನು ಕರೆಸುತ್ತಾರೆ ಹಾಗೂ ಭಾರತ ಮಾತೆಯ ಬೆನ್ನಿಗಿರಿಯುತ್ತಾರೆಂದು ಕೇಜ್ರಿವಾಲ್, ಬಿಜೆಪಿ ಹಾಗೂ ಆರೆಸ್ಸೆಸ್‌ಗಳನ್ನು ಆರೋಪಿಸಿದ್ದಾರೆ.
ತನಗೆ ದಾಳಿಯ ಕುರಿತು ಸಾಕಷ್ಟು ವಿವರ ನೀಡಲ್ಲವೆಂದು ಇಸ್ಲಾಮಾಬಾದ್ ಪ್ರತಿಪಾದಿಸದಂತೆ ಖಚಿತಪಡಿಸಲು ಪಾಕಿಸ್ತಾನಿ ತನಿಖೆದಾರರಿಗೆ ಪಠಾಣ್ ಕೋಟ್‌ಗೆ ಹೋಗಲು ಭಾಗಶಃ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಯಿತೆಂದು ಸರಕಾರದ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ನಾಯಕ ಮಸೂದ್ ಅಝರ್ ಈ ದಾಳಿಯ ರೂವಾರಿಯೆಂಬುದನ್ನು ಸಾಬೀತುಪಡಿಸುವ ಸಾಕಷ್ಟು ಸಾಕ್ಷಗಳನ್ನು ಹಂಚಿಕೊಳ್ಳಲಾಗಿದೆಯೆಂದು ಭಾರತ ಸ್ಪಷ್ಟಪಡಿಸುತ್ತಿದೆ.







