ಹದಿಹರೆಯದ ದಲಿತ ಯುವಕರನ್ನು ವಿವಸ್ತ್ರಗೊಳಿಸಿ ಹಲ್ಲೆ: ಆರು ಜನರ ಸೆರೆ
ಜೈಪುರ,ಎ.5: 15ರಿಂದ 18ರ ವಯೋಮಾನದ ಮೂವರು ಹದಿಹರೆಯದ ದಲಿತ ಯುವಕರನ್ನು ವಿವಸ್ತ್ರಗೊಳಿಸಿ ಥಳಿಸಿದ್ದಕ್ಕಾಗಿ ಆರು ಜನರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಿತ್ತೋಡಗಡ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿತ್ತು.
ಈ ಯುವಕರು ಬೈಕೊಂದನ್ನು ಕದ್ದಿದ್ದಾರೆಂದು ಆರೋಪಿಸಿ ಗುಂಪೊಂದು ಅವರನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿತ್ತಲ್ಲದೆ,ಬಳಿಕ ಮರಕ್ಕೆ ಕಟ್ಟಿ ಹಾಕಿ ಥಳಿಸಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಸ್ಸಿ ಠಾಣಾ ಪೊಲೀಸರು ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಆರು ಜನರನ್ನು ನಾವು ಬಂಧಿಸಿದ್ದು,ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಹಲ್ಲೆಗೊಳಗಾದ ಯುವಕರು ಲಕ್ಷ್ಮೀಪುರ ಗ್ರಾಮದಿಂದ 30 ಕಿ.ಮೀ.ದೂರದ ದೂಧ್ ತಲಾಯಿ ನಿವಾಸಿಗಳಾಗಿದ್ದು ಅಲೆಮಾರಿ ಕಂಜಾರ್ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ಜನಾಂಗದವರು ಸಾಮಾನ್ಯವಾಗಿ ಗ್ರಾಮಗಳ ಹೊರಗೆ ಟೆಂಟ್‌ಗಳಲ್ಲಿ ವಾಸವಾಗಿರುತ್ತಾರೆ.
ಈ ಮೂವರು ಯುವಕರು ಈ ಹಿಂದೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು,ಎರಡು ಕಳ್ಳತನ ಪ್ರಕರಣಗಳಲ್ಲಿ ಇವರ ವಿರುದ್ಧ ದೋಷಾರೋಪಣ ಪಟ್ಟಿ ದಾಖಲಾಗಿದೆ ಎಂದಿರುವ ಪೊಲೀಸರು, ಭಿಲ್ವಾಡಾದಿಂದ ಕಳ್ಳತನ ಮಾಡಿದ್ದ ಬೈಕ್‌ನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತನ್ಮಧ್ಯೆ ಉದ್ರಿಕ್ತ ಜನರ ಗುಂಪು ಈ ಮೂವರನ್ನು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.





