ಪ್ರಾಂಶುಪಾಲೆಗೆ ನಿವೃತ್ತಿಯ ಉಡುಗೊರೆಯಾಗಿ ‘ಸಮಾಧಿ’ ನಿರ್ಮಿಸಿದ ವಿದ್ಯಾರ್ಥಿಗಳು
ಪಾಲಕ್ಕಾಡ್(ಕೇರಳ),ಎ.5: 127 ವರ್ಷಗಳಷ್ಟು ಹಳೆಯದಾದ ಇಲ್ಲಿಯ ಪ್ರತಿಷ್ಠಿತ ಸರಕಾರಿ ವಿಕ್ಟೋರಿಯಾ ಕಾಲೇಜಿನ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐಗೆ ಸೇರಿದ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಪ್ರಾಂಶುಪಾಲರನ್ನು ಅವಮಾನಿಸಲು ಅವರಿಗೆ ‘ನಿವೃತ್ತಿಯ ಉಡುಗೊರೆ ’ಯಾಗಿ ಸಾಂಕೇತಿಕ ಸಮಾಧಿಯನ್ನು ಸಿದ್ಧಗೊಳಿಸಿದ್ದು,ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಎಡರಂಗಕ್ಕೆ ನಿಷ್ಠವಾಗಿರುವ ಅಖಿಲ ಕೇರಳ ಸರಕಾರಿ ಕಾಲೇಜು ಶಿಕ್ಷಕರ ಒಕ್ಕೂಟದ ಕೆಲವು ಸದಸ್ಯರ ಪ್ರಚೋದನೆಯ ಮೇರೆಗೆ ವಿದ್ಯಾರ್ಥಿಗಳು ಈ ಕೃತ್ಯವನ್ನೆಸಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾಗಿದ್ದು, ಮಾ.31ರಂದು ಸೇವೆಯಿಂದ ನಿವೃತ್ತರಾಗಿರುವ ಡಾ.ಟಿ.ಎನ್ ಸರಸು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಡಾ.ಸರಸು ತನ್ನ ದೂರಿನಲ್ಲಿ ಕನಿಷ್ಠ ಎಂಟು ಎಸ್‌ಎಫ್‌ಐ ವಿದ್ಯಾರ್ಥಿಗಳನ್ನು ಹೆಸರಿಸಿದ್ದಾರೆ. ಈ ವಿದ್ಯಾರ್ಥಿಗಳು ಮಾ.31ರಂದು ಬೆಳಗ್ಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಸಾಂಕೇತಿಕ ಸಮಾಧಿಯನ್ನು ನಿರ್ಮಿಸಿ ಅದರ ಮೇಲೆ ಹೂವುಗನ್ನು ಹರಡಿ, ಪುಷ್ಪಗುಚ್ಛವೊಂದನ್ನು ಇರಿಸಿದ್ದರು ಎನ್ನಲಾಗಿದೆ.
ತಾನು ಅವರ ನ್ಯಾಯಯುತವಲ್ಲದ ಬೇಡಿಕೆಗಳಿಗೆ ಮಣಿದಿರಲಿಲ್ಲ ಮತ್ತು ಇದು ಅವರ ಕೋಪಕ್ಕೆ ಕಾರಣವಾಗಿರಬಹುದು ಎಂದು ಸರಸು ಸುದ್ದಿಸಂಸ್ಥೆಗೆ ತಿಳಿಸಿದರು.





