ಅಶ್ಲೀಲ ಜಾಲತಾಣಗಳನ್ನು ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ
ಚೆನ್ನೈ, ಎ.5: ಅಶ್ಲೀಲ ಜಾಲತಾಣಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶ ನೀಡುವಂತೆ ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ. ಇಂತಹ ವಿಷಯಗಳು ಯುವಜನರ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ,ಜೊತೆಗೆ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ ಮತ್ತು ಅಪರಾಧಗಳನ್ನು ಪ್ರಚೋದಿಸುತ್ತವೆ ಎಂದು ಅರ್ಜಿಯು ವಾದಿಸಿದೆ.
ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಎಸ್.ವಿಮಲಾ ಅವರನ್ನೊಳಗೊಂಡ ಪೀಠವು ಪ್ರತಿ ಅಫಿದಾವತ್ತನ್ನು ಸಲ್ಲಿಸುವಂತೆ ಕ್ರೈಂ ಬ್ರಾಂಚ್,ಸಿಐಡಿ ಮತ್ತು ಎಡಿಜಿಪಿ ಅವರಿಗೆ ನಿರ್ದೇಶಗಳನ್ನು ನೀಡಿತು. ಮುಂದಿನ ವಿಚಾರಣೆಯನ್ನು ಜೂ.21ಕ್ಕೆ ನಿಗದಿಗೊಳಿಸಿತು.
ಆನ್‌ಲೈನ್‌ನಲ್ಲಿ ಲಭ್ಯವಿರುವ ಅಶ್ಲೀಲ ಜಾಲತಾಣಗಳು ದೇಶದ ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ ಎನ್ನುವುದು ಸ್ಪಷ್ಟವಿದೆ ಎಂದು ಪ್ರತಿಪಾದಿಸಿರುವ ಅರ್ಜಿದಾರ ಅಕ್ಬರ್ ಅಹ್ಮದ್ ಅವರು, ಸೈಬರ್ ಪೊರ್ನೊಗ್ರಫಿ ಮೂಲಕ ಮುಕ್ತ ಲೈಂಗಿಕ ಸಂಸ್ಕೃತಿಯು ಹೆಚ್ಚುತ್ತಿರುವುದರಿಂದ ಈ ಪಿಡುಗನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಕಲಂ 67 ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲಿ ಅಶ್ಲೀಲ ವಿಷಯ ಮತ್ತು ಪೊರ್ನೊಗ್ರಫಿಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ ಮತ್ತು ಇಂತಹ ಜಾಲತಾಣಗಳ ನಿರ್ಮಾಪಕರು,ವಿತರಕರು ಮತ್ತು ವೀಕ್ಷಕರನ್ನು ಕಠಿಣ ದಂಡನೆಗೊಳಪಡಿಸಲು ಅವಕಾಶ ಕಲ್ಪಿಸಿದೆ ಎಂದು ಅವರು ತನ್ನ ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ.







