ಕಶ್ಯಪ್ ಒಲಿಂಪಿಕ್ಸ್ ಕನಸು ಭಗ್ನ?

ಹೊಸದಿಲ್ಲಿ, ಎ.5: ಇನ್ನೂ ಮಂಡಿನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಭಾರತದ ಬ್ಯಾಡ್ಮಿಂಟನ್ ಆಟಗಾರ ಪಿ.ಕಶ್ಯಪ್ ಈ ತಿಂಗಳು ನಡೆಯಲಿರುವ ಮಲೇಷ್ಯಾ ಓಪನ್ ಸೂಪರ್ ಸರಣಿ ಹಾಗೂ ಸಿಂಗಾಪುರ ಓಪನ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂಬರುವ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆಯಿದೆ.
ವೃತ್ತಿಜೀವನದಲ್ಲಿ ಗಂಭೀರ ಗಾಯದ ಸಮಸ್ಯೆಗೆ ಸಿಲುಕಿರುವ ಕಶ್ಯಪ್ ಮಲೇಷ್ಯಾ ಹಾಗೂ ಸಿಂಗಾಪುರ ಓಪನ್‌ನ ವೇಳೆಗೆ ಸಂಪೂರ್ಣ ಫಿಟ್‌ನೆಸ್ ಪಡೆಯಲಿದ್ದಾರೆ ಎಂಬ ವಿಶ್ವಾಸ ಮೂಡಿಸಿದ್ದರು. ಈ ಎರಡು ಟೂರ್ನಿಯು ಅವರಿಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆದುಕೊಳ್ಳಲು ಅತ್ಯಂತ ಮುಖ್ಯವಾಗಿತ್ತು. ಇದೀಗ ಅವರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಈಡೇರುವ ಲಕ್ಷಣ ಕಾಣುತ್ತಿಲ್ಲ.
ಈ ತಿಂಗಳು ನನಗೆ ಯಾವುದೇ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನನಾಗಿರುವ ಗಾಯ ಗಂಭೀರವಾದುದು. ನನ್ನ ಪ್ರಾಥಮಿಕ ಚಿಕಿತ್ಸೆ ಸರಿಯಾಗಿಲ್ಲ. ನಾನು ಎರಡೇವಾರದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ನಾನು ಯಾರನ್ನೂ ದೂಷಿಸಲಾರೆ. ಎಲ್ಲರೂ ನಾನು ಬೇಗನೆ ಆಡುವುದನ್ನು ಬಯಸುತ್ತಿದ್ದಾರೆ ಎಂದು ವಿಶ್ವದ ನಂ.17ನೆ ಆಟಗಾರ ಕಶ್ಯಪ್ ಹೇಳಿದ್ದಾರೆ.
ಜರ್ಮನಿ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯದ ನಡುವೆಯೂ ಗಾಯಾಳು ನಿವೃತ್ತಿಯಾಗಿದ್ದ ಕಶ್ಯಪ್, ತಾನು ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ 3 ವಾರಗಳ ಅಗತ್ಯವಿದೆ ಎಂದು ಹೇಳಿದ್ದಾರೆ.







