ಕಿಂಗ್‌ಪಿನ್ ಶಿವಕುಮಾರ್‌ಗಾಗಿ ತೀವ್ರ ಶೋಧ

ಬೆಂಗಳೂರು, ಎ.5: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕಗ್ಗೆರೆಯ ಶಿವಕುಮಾರ್ ಅಲಿಯಾಸ್ ಶಿವಕುಮಾರ್ ಗುರೂಜಿಯು ಪ್ರಮುಖ ಪಾತ್ರ ವಹಿಸಿರುವುದಲ್ಲದೆ, ಆತನ ಒಬ್ಬ ಪುತ್ರ ಮತ್ತು ತಮ್ಮನ ಮಗ ಸಹ ದಂಧೆಯಲ್ಲಿ ಶಾಮೀಲಾಗಿರುವುದು ಸಿಐಡಿ ತನಿಖೆಯಿಂದ ತಿಳಿದು ಬಂದಿದೆ.
ಹಲವು ವರ್ಷಗಳಿಂದ ವಿವಿಧ ದಂಧೆಗಳಲ್ಲಿ ಪಾಲ್ಗೊಂಡಿರುವ ಈತ ಮೊದಲು ಪ್ರೌಢಶಾಲಾ ಶಿಕ್ಷಕನಾಗಿದ್ದು, 20 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಎಂದು ತಿಳಿದುಬಂದಿದೆ. ಶಿಕ್ಷಕ ವೃತ್ತಿಯ ನಂತರ ಮೂರ್ನಾಲ್ಕು ಕಡೆ ಖಾಸಗಿ ಟ್ಯುಟೋರಿಯಲ್‌ಗಳನ್ನು ಪ್ರಾರಂಭಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಈತನ ಮೇಲೆ ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ 2 ಮತ್ತು ಬೆಂಗಳೂರಿನಲ್ಲಿ 2 ಮೊಕದ್ದಮೆ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಈತನಿಗಾಗಿ ಸಿಐಡಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ಮತ್ತೆ 10 ಮಂದಿ ಸಿಐಡಿ ವಶಕ್ಕೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ತಂಡ ಮತ್ತೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ. ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷಾಧಾರಗಳು ದೊರೆತ ತಕ್ಷಣವೇ ಬಂಧನಕ್ಕೆ ಮುಂದಾಗುವುದು ಎಂದು ಹೇಳಿರುವ ಸಿಐಡಿ, ಇಂದು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಅಮಾನತುಗೊಂಡಿದ್ದ ಪದವಿ ಪೂರ್ವ ಶಿಕ್ಷಣ ಮಂಡಳಿ ಪರೀಕ್ಷಾ ವಿಭಾಗದ ಸಿಬ್ಬಂದಿ ಸೇರಿ ಇನ್ನಿತರರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಕಣ್ಣೀರಿಟ್ಟ ಆರೋಪಿಗಳು ಎ.13ವರೆಗೂ ಸಿಐಡಿ ವಶಕ್ಕೆ
ಬೆಂಗಳೂರು, ಎ.5: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಾದ ಸಚಿವರ ವಿಶೇಷಾಧಿಕಾರಿ ಓಬಳರಾಜು, ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹಾಗೂ ಲೋಕೋಪಯೋಗಿ ಇಲಾಖೆಯ ರುದ್ರಪ್ಪ ಅವರನ್ನು ಇಂದು ಬೆಂಗಳೂರಿನ 1ನೆ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ ಸಂದರ್ಭದಲ್ಲಿ ಮೂವರೂ ಕಟಕಟೆಯಲ್ಲಿ ಕಣ್ಣೀರಿಟ್ಟರು. ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಆರೋಪಿಗಳನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದರು. ಆದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಹೆಚ್ಚಿನ ತನಿಖೆಗೆ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಎ.13ವರೆಗೂ ಆರೋಪಿಗಳು ಸಿಐಡಿ ವಶದಲ್ಲಿರುತ್ತಾರೆ ಎಂದು ತಿಳಿದುಬಂದಿದೆ.







