ಪರಿಷ್ಕೃತ ದರ ಇಂದಿನಿಂದಲೇ ಜಾರಿ
ಎಲ್‌ಇಡಿ ಬಲ್ಬ್ ದರ 80 ರೂ.ಗೆ ಇಳಿಕೆ
ಬೆಂಗಳೂರು, ಎ.5: ಕೇಂದ್ರ ಸರಕಾರದ ಉಜಾಲ ಯೋಜನೆಯಡಿ(ರಾಜ್ಯದಲ್ಲಿ ಹೊಸಬೆಳಕು ಯೋಜನೆ) ಎಲ್‌ಇಡಿ ಬಲ್ಬ್‌ಗಳ ಬೆಲೆ ಇಳಿಕೆಯಾಗಿದ್ದು, ರಾಜ್ಯದಲ್ಲಿ ಎಲ್‌ಇಡಿ ಬಲ್ಬ್‌ಗಳ ಬೆಲೆ 80 ರೂ.ಆಗಲಿದೆ. ಇದುವರೆಗೆ ಇದರ ಬೆಲೆ 100 ರೂ.ಇತ್ತು. ರಾಜ್ಯದಲ್ಲಿ ಎಲ್‌ಇಡಿ ಬಲ್ಬ್‌ಗಳ ಪರಿಷ್ಕೃತ ದರವನ್ನು ಎ.6ರಿಂದ ಜಾರಿಗೆ ತರಲಾಗುತ್ತಿದೆ.
ಕೇಂದ್ರ ಸರಕಾರದ ಉನ್ನತ ಜ್ಯೋತಿ(ಉಜಾಲ) ಯೋಜನೆಯಡಿ ಕೈಗೆಟುಕುವ ದರದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಪೂರೈಸುತ್ತಿರುವ ಎನರ್ಜಿ ಎಫಿಸಿಯನ್ಸಿ ಸರ್ವಿಸ್ ಲಿಮಿಟೆಡ್(ಇಇಎಸ್‌ಎಲ್) ಎಲ್‌ಇಡಿ ಬಲ್ಬ್‌ಗಳ ಬೆಲೆಯನ್ನು ಇಳಿಕೆ ಮಾಡಿದೆ.
ಕಳೆದ ಮಾರ್ಚ್‌ನಲ್ಲಿ ಪ್ರತಿ ಒಂದು ಎಲ್‌ಇಡಿ ಬಲ್ಬ್ ಅನ್ನು 54.90ರೂ.(ತೆರಿಗೆ ಹೊರತುಪಡಿಸಿ)ಗಳಿಗೆ ಖರೀದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬೆಲೆ ಇಳಿಕೆಯ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಕಂಪೆನಿ ನಿರ್ಧರಿಸಿದೆ. ಬೆಲೆ ಇಳಿಕೆ ಪರಿಣಾಮ ಇದೀಗ ಎಲ್‌ಇಡಿ ಬಲ್ಬ್‌ಗಳ ಬೆಲೆ 75 ರಿಂದ 95 ರೂ.ಆಗಿದೆ.
ಆಡಳಿತಾತ್ಮಕ ವೆಚ್ಚ, ಪೂರೈಕೆ ವೆಚ್ಚ ಮತ್ತು ಆಯಾ ರಾಜ್ಯಗಳಲ್ಲಿರುವ ತೆರಿಗೆಗಳನ್ನು ಸೇರಿಸಿ ಈ ದರವನ್ನು ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಲ್ಬ್‌ಗಳ ಬೆಲೆ ಆಯಾ ರಾಜ್ಯಗಳ ತೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಬೆಲೆಯಲ್ಲಿ ಸ್ವಲ್ಪವ್ಯತ್ಯಾಸ ಇರುತ್ತದೆ.
ಸ್ಥಳೀಯ ತೆರಿಗೆ ಅನ್ವಯ ವಿವಿಧ ರಾಜ್ಯಗಳಲ್ಲಿ ಎಲ್‌ಇಡಿ ಬಲ್ಬ್‌ಗಳಿಗೆ ವಿವಿಧ ರೀತಿಯ ಬೆಲೆಯನ್ನು ನಿಗದಿ ಮಾಡಲಾಗಿದೆ. ದಿಲ್ಲಿ(75 ರೂ.), ಹರಿಯಾಣ (75), ರಾಜಸ್ಥಾನ(80), ಕರ್ನಾಟಕ(80), ಮಹಾರಾಷ್ಟ್ರ(85), ಹಿಮಾಚಲಪ್ರದೇಶ(85), ಛತ್ತೀಸ್‌ಗಡ(85), ಓಡಿಸ್ಸಾ(85), ಮಧ್ಯಪ್ರದೇಶ(85), ಜಾರ್ಖಂಡ್(90), ಬಿಹಾರ(90), ಉತ್ತರಾಖಂಡ(90) ಹಾಗೂ ಜಮ್ಮು ಕಾಶ್ಮೀರದಲ್ಲಿ 95 ರೂ. ನಿಗದಿ ಮಾಡಲಾಗಿದೆ ಎಂದು ಇಇಎಸ್‌ಎಲ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.





