ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಜಾಮೀನುರಹಿತ ಕ್ರಿಮಿನಲ್ ಕೇಸ್: ಕಿಮ್ಮನೆ

ಬೆಂಗಳೂರು, ಎ.5: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಗಳಾಗಿರುವ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಜಾಮೀನುರಹಿತ ಬಂಧನಕ್ಕೆ ಶಿಕ್ಷಣ ಕಾಯ್ದೆಯಲ್ಲಿ ತಿದ್ದುಪಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ಲೋಪದಿಂದಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಖಚಿತವಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಲಾಗುವುದು ಎಂದು ಹೇಳಿದರು.
2012ರಲ್ಲಿಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಹೀಗಾಗಿ 2012ರಿಂದ 2016ರವರೆಗೆ ಪ್ರಶ್ನೆ ಪತ್ರಿಕೆ ತಯಾರು ಮಾಡಿರುವ ಶಿಕ್ಷಕರು, ಅಧಿಕಾರಿಗಳು ಹಾಗೂ ಪ್ರಶ್ನೆಪತ್ರಿಕೆಯನ್ನು ಮುದ್ರಿಸಿದ ಸಂಸ್ಥೆಯ ಮಾಲಕರನ್ನು ವೌಖಿಕ ಹಾಗೂ ಲಿಖಿತವಾಗಿ ವಿಚಾರಣೆ ನಡೆಸುವಂತೆ ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಸಚಿವ ಕಿಮ್ಮನೆ ರತ್ನಾಕರ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ವತಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯಲ್ಲಿರುವ ಲೋಪದೋಷಗಳ ಕುರಿತು ತನಿಖೆ ನಡೆಸಲು ಮೂರು ಸದಸ್ಯರ ಪೀಠವನ್ನು ರಚಿಸಲಾಗಿದೆ. ಶಿಕ್ಷಣ ಕಾಯ್ದೆಗೆ ಅಗತ್ಯವಿರುವ ಎಲ್ಲ ಅಂಶಗಳನ್ನು ತಮ್ಮ ವರದಿಯಲ್ಲಿ ಸೂಚಿಸುವಂತೆ ಸಮಿತಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಹಾಗೂ ಪಾರದರ್ಶಕವಾಗಿ ನಡೆಸಲಾಗುವುದು. ಇದಕ್ಕಾಗಿ ಪಿಯು ಪರೀಕ್ಷಾ ಮಂಡಳಿ ಹಾಗೂ ಆಡಳಿತ ಕಚೇರಿಯನ್ನು ಪ್ರತ್ಯೇಕಗೊಳಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಪ್ರಶ್ನೆ ಪತ್ರಿಕೆ ಸೇರಿದಂತೆ ಪರೀಕ್ಷೆಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.







