ನಾಲ್ಕು ವಾರಗಳಲ್ಲಿ ಅರ್ಜಿ ಪರಿಗಣಿಸಲು ಸೂಚನೆ
ಜಿಪಂ-ತಾಪಂ ಸ್ಥಾನ ಮೀಸಲು ಪ್ರಕಟ ತಡ
ಬೆಂಗಳೂರು, ಎ.5: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮೀಸಲು ಪ್ರಕಟಣೆ ವಿಳಂಬ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿಗೊಳಿಸಿದೆ.
ಈ ಸಂಬಂಧ ದೇವನಹಳ್ಳಿ ತಾಲೂಕು ನಿವಾಸಿಗಳಾದ ಆಂಜಿನಪ್ಪ ಮತ್ತು ದೀಪಕ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ. ಈ ಆದೇಶ ನೀಡಿದೆ. ಸರಕಾರಕ್ಕೆ ಮನವಿ ಸಲ್ಲಿಸಲು ಪಂಚಾಯತ್ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಾಲ್ಕು ವಾರಗಳಲ್ಲಿ ಈ ಅರ್ಜಿಯನ್ನು ಪರಿಗಣಿಸಲು ಸೂಚಿಸಿದೆ.
ತಾಲೂಕು ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ರೋಸ್ಟರ್ ಅನುಸಾರ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಹಿನ್ನೆಲೆ: ರಾಜ್ಯದಲ್ಲಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸ್ಥಾನಗಳಿಗೆ 2016ರ ಫೆ.13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಫೆ.23ರಂದು ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಪ್ರಕಟಗೊಂಡು ತಿಂಗಳು ಕಳೆದರೂ ರಾಜ್ಯ ಸರಕಾರ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸ್ಥಾನಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಕಲ್ಪಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ-1993 ನಿಯಮಗಳ ಅನ್ವಯ ಚುನಾವಣೆ ಫಲಿತಾಂಶ ಪ್ರಕಟಗೊಂಡ ಕೂಡಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಬೇಕು. ಆದರೆ, ರಾಜ್ಯ ಸರಕಾರ ಈವರೆಗೂ ಮೀಸಲು ಅಧಿಸೂಚನೆ ಹೊರಡಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.





