ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಓಬಳರಾಜು ಕರ್ತವ್ಯದಿಂದ ವಜಾ

ಸಿಐಡಿ ವಿಚಾರಣೆಗೆ ಸಿದ್ಧ: ಸಚಿವ ಶರಣಪ್ರಕಾಶ್ ಪಾಟೀಲ್
ಬೆಂಗಳೂರು, ಎ.5: ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಪ್ರಮುಖ ಆರೋಪದಲ್ಲಿ ಸಿಐಡಿ ವಶದಲ್ಲಿರುವ ತಮ್ಮ ಕಚೇರಿಯ ವಿಶೇಷಾಧಿಕಾರಿ ಓಬಳರಾಜು ಅವರನ್ನು ಕರ್ತವ್ಯದಿಂದ ವಜಾಗೊಳಿಸಿದ್ದು, ಅಗತ್ಯವಿದ್ದಲ್ಲಿ ಸಿಐಡಿ ಅಧಿಕಾರಿಗಳು ತನ್ನನ್ನೂ ವಿಚಾರಣೆಗೆ ಒಳಪಡಿಸಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿಶೇಷಾಧಿಕಾರಿ ಓಬಳರಾಜು ಭಾಗಿಯಾಗಿರುವುದು ಸಿಐಡಿ ತನಿಖೆಯಿಂದ ಬಹಿರಂಗಗೊಂಡಿದೆ.
ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಆತನನ್ನು ಕರ್ತವ್ಯದಿಂದ ವಜಾಗೊಳಿಸಿದ್ದೇನೆ. ಈ ಪ್ರಕರಣದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂಬ ಇಲ್ಲಸಲ್ಲದ ಆರೋಪಗಳು ಕೇಳಿಬರುತ್ತಿವೆ. ಅಗತ್ಯಬಿದ್ದಲ್ಲಿ ಸಿಐಡಿ ಅವರು ತಮ್ಮನ್ನು ವಿಚಾರಣೆ ಮಾಡಲಿ, ಇದಕ್ಕೆ ಮುಕ್ತ ಅವಕಾಶ ನೀಡುವುದಾಗಿ ನುಡಿದರು.
ಖುದ್ದು ಸಿಎಂಗೆ ಮಾಹಿತಿ: ಈ ಪ್ರಕರಣದಿಂದಾಗಿ ತಾನು ಮುಜುಗರಕ್ಕೆ ಒಳಪಟ್ಟಿದ್ದೇನೆ ಎಂದ ಪಾಟೀಲ್, ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೊಬೈಲ್ ಕರೆ ಮೂಲಕ ಖುದ್ದು ವಿವರ ನೀಡಿದ್ದೇನೆ ಎಂದರು.
.....
ರಾಜೀನಾಮೆ ಅಗತ್ಯವಿಲ್ಲ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನನ್ನ ಸಿಬ್ಬಂದಿಯ ಬಂಧನವಾಗಿರಬಹುದು. ಆದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಓಬಳರಾಜು ಮಾಡುವ ಎಲ್ಲ ವಿಚಾರಗಳೂ ನನಗೆ ಗೊತ್ತಾಗುವುದಿಲ್ಲ. ಅವರು ನನ್ನ ಶಾಸನಸಭೆ, ಇಲಾಖೆಯ ಆರ್‌ಟಿಐ ಪತ್ರವ್ಯವಹಾರ ಹಾಗೂ ಪ್ರವಾಸಿ ಸಂಬಂಧ ಕೆಲಸಗಳನ್ನು ಮಾತ್ರ ನೋಡಿಕೊಳ್ಳುತ್ತಿದ್ದರು. ನನ್ನ ಕಚೇರಿಯಲ್ಲಿಯೇ ಇಂತಹ ವ್ಯಕ್ತಿ ಇದ್ದ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ.
- ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
....
ಓಬಳರಾಜುಗೆ ಶಿಫಾರಸು ಮಾಡಿದ್ದು ಬಿಜೆಪಿಯ ಮಾಜಿ ಸಚಿವ
ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಶಿಫಾರಸು ಮೇರೆಗೆ ಮೈಸೂರು ಮೂಲದ ಓಬಳರಾಜು ಅವರನ್ನು ಬೇರೆ ಇಲಾಖೆಯಿಂದ ನನ್ನ ಕಚೇರಿಗೆ ಸೇರಿಸಿಕೊಳ್ಳಲಾಯಿತು. ಮೊದಲು ಆಪ್ತ ಸಹಾಯಕ ಹುದ್ದೆಯಲ್ಲಿದ್ದರು. ತದನಂತರ ಬಡ್ತಿ ಪಡೆದು ವಿಶೇಷಾಧಿಕಾರಿ ಆದರು. ಇಷ್ಟು ಮಾಹಿತಿ ಬಿಟ್ಟರೆ ಅವರ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ ಎಂದು ಸಚಿವ ಪಾಟೀಲ್ ವಿವರಿಸಿದರು.







