‘ನೇತ್ರಾವತಿ ಉಳಿಸಿ, ಎತ್ತಿನಹೊಳೆ ವಿರೋಧಿಸಿ’ ಸಭೆ ರದ್ದು
ಉಪ್ಪಿನಂಗಡಿ, ಎ.5: ‘ನೇತ್ರಾವತಿ ಉಳಿಸಿ ಹೋರಾಟಗಾರ’ ಎಂದು ಹೇಳಿಕೊಂಡು ಆನಂದ ಗೌಡ ರಾಮಕುಂಜ ಎಂಬವರು ನೇತ್ರಾವತಿ ಉಳಿಸಿ ಎತ್ತಿನ ಹೊಳೆ ವಿರೋ ಧಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಸಲುವಾಗಿ ಉಪ್ಪಿನಂಗಡಿಯಲ್ಲಿ ಕರೆದ ಪೂರ್ವಭಾವಿ ಸಭೆಗೆ ಜನ ಬಾರದೆ ಸಭೆ ರದ್ದುಗೊಂಡ ಘಟನೆ ಮಂಗಳವಾರ ನಡೆಯಿತು.
ಎತ್ತಿನ ಹೊಳೆ ಯೋಜನೆ ವಿರುದ್ಧ ಎ.12ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಇದರ ಸಲುವಾಗಿ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗು ವುದು. ಸಭೆಯಲ್ಲಿ ನೇತ್ರಾವತಿ ಉಳಿಸಿ ಹೋರಾಟಗಾರರು, ವಿವಿಧ ಸಂಘ ಸಂಸ್ಥೆ ಮುಖಂಡರು, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕರಪತ್ರ ಹಂಚಲಾಗಿತ್ತು. ಆದರೆ ಸಭೆಗೆ ನಿರೀಕ್ಷಿತ ಜನ ಬಾರದೆ ಸಭೆ ರದ್ದು ಗೊಂಡಿದೆ. ಬೆಳಗ್ಗೆ 10 ಗಂಟೆಗೆ ಸಭೆ ಕರೆಯಲಾಗಿತ್ತು. ಆದರೆ ಸಭೆ ಕರೆದ ಆನಂದ ಗೌಡ ಮಾತ್ರ ಇದ್ದರು. ತುಸು ಹೊತ್ತಿನಲ್ಲಿ ಪುತ್ತೂರು ಪುರಂದರ ಭಟ್ ಸೇರಿಕೊಂಡರು. ಹೀಗೆ ಇಬ್ಬರು ಮಾತ್ರ ಸೇರಿದ್ದರು. ನೇತ್ರಾವತಿ ನದಿ ತಿರುವು ಗಂಭೀರ ವಿಷಯದ ಸಭೆ ಕಾರಣಕ್ಕಾಗಿ ಸೇರಿದ್ದ 3 ಜನ ಪತ್ರಕರ್ತರು ಸುಮಾರು 1 ತಾಸು 20 ನಿಮಿಷ ಕಾದು ಕುಳಿತರೂ ಸಭೆಗೆ ಬೇರೆ ಯಾರೂ ಬಾರದ ಕಾರಣ ಪತ್ರಕರ್ತರು ಮರಳಿದರು.
ಇಂದಿನ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಎ.12ರಂದು ನಿಗದಿಪಡಿಸಿದ್ದ ಪ್ರತಿಭಟನಾ ಸಭೆಯನ್ನೂ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಡಾ. ನಿರಂಜನ ರೈ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ಸಂದರ್ಭ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಆನಂದ ಗೌಡ ರಾಮಕುಂಜ ತಿಳಿಸಿದ್ದಾರೆ.





