'ಭಾರತ್ ಮಾತಾಕಿ ಜೈ' ಹೇಳುವವರು ಮುಸ್ಲಿಮರಂತೆ ಪ್ರತಿದಿನ ತಾಯ್ನಾಡಿನೆದುರು 96 ಬಾರಿ ಸಾಷ್ಟಾಂಗವೆರಗುತ್ತಾರೆಯೇ ?

ಲಕ್ನೋ, ಎ.6 : " ಮುಸ್ಲಿಮರು ಪ್ರತಿದಿನ ಐದು ಹೊತ್ತಿನ ನಮಾಝ್ ಮಾಡುವಾಗ ತಮ್ಮ ತಾಯ್ನಾಡಿನೆದುರು 96 ಬಾರಿ ಸಾಷ್ಟಾಂಗ ವೆರಗುತ್ತಾರೆ. ಆದರೆ ' ಭಾರತ್ ಮಾತಾಕಿ ಜೈ ' ಘೋಷಣೆ ಕೂಗುವವರು ಎಷ್ಟು ಬಾರಿ ಹೀಗೆ ತಾಯ್ನಾಡಿಗೆ ಗೌರವ ಸಲ್ಲಿಸುತ್ತಾರೆ " ಎಂದು ಖ್ಯಾತ ವಿದ್ವಾಂಸ ಹಾಗು ಧಾರ್ಮಿಕ ಮುಖಂಡ ಮೌಲಾನ ಖಾಲಿದ್ ರಶೀದ್ ಫ಼ರಂಗಿಮಹ್ಲಿ ಅವರು ಸಂಘ ಪರಿವಾರದ ಸಂಘಟನೆಗಳನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
" ಮುಸ್ಲಿಮರು ತಮ್ಮ ದೇಶಪ್ರೇಮವನ್ನು ಯಾರ ಬಳಿಯೂ ಸಾಬೀತು ಪಡಿಸಬೇಕಾಗಿಲ್ಲ. ನಾವು ' ಹಿಂದುಸ್ತಾನ್ ಜ್ಹಿಂದಾಬಾದ್, ಜೈ ಹಿಂದ್ ಹಾಗು ಮದ್ರೆ ವತನ್ ' ಘೋಷಣೆಗಳನ್ನು ಕೂಗುತ್ತಿದ್ದೇವೆ. ಇವೆಲ್ಲವೂ ' ಭಾರತ್ ಮಾತಾಕಿ ಜೈ ' ಎಂಬುದರ ಅರ್ಥವನ್ನೇ ಸೂಚಿಸುತ್ತವೆ . ನಾವು ಯಾರದ್ದೇ ಒತ್ತಡಕ್ಕೆ ಮಣಿದು ' ಭಾರತ್ ಮಾತಾಕಿ ಜೈ ' ಹೇಳುವುದಿಲ್ಲ " ಎಂದವರು ಸ್ಪಷ್ಟಪಡಿಸಿದರು.
" ಧಾರ್ಮಿಕ ಪ್ರಾಮುಖ್ಯತೆಯುಳ್ಳ ದಾರುಲ್ ಉಲೂಂ ನಂತಹ ಸಂಸ್ಥೆಗಳು ' ಭಾರತ್ ಮಾತಾಕಿ ಜೈ' ನಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಫತ್ವಾ ನೀಡಬಾರದು.ದಾರುಲ್ ಉಲೂಂ ನಂತಹ ಸಂಸ್ಥೆಗಳು ನೀಡುವ ಫ಼ತ್ವಾವನ್ನು ಮುಸ್ಲಿಂ ಸಮುದಾಯ ಗಂಭೀರವಾಗಿ ಸ್ವೀಕರಿಸುತ್ತದೆ. ಇಂತಹ ಫ಼ತ್ವಾಗಳಿಂದ ಮುಸ್ಲಿಂ ಸಮುದಾಯ ಮುಖ್ಯವಾಹಿನಿಯಿಂದ ಮತ್ತೆ ಪ್ರತ್ಯೇಕವಾಗಿ ಏಕಾಂಗಿಯಾಗುತ್ತದೆ . ಹಾಗಾಗಿ ಇಂತಹ ಫ಼ತ್ವಾಗಳನ್ನು ನೀಡಬಾರದು " ಎಂದು ಇತ್ತೀಚಿಗೆ ಈ ಬಗ್ಗೆ ಫ಼ತ್ವಾ ನೀಡಿದ ದಾರುಲ್ ಉಲೂಂ ಅನ್ನು ಟೀಕಿಸಿದರು.





