ಸಿಎಫ್‌ಎಲ್ ಬಲ್್ಬ ಗಳ ವಿತರಣೆಗೆ ಕಾಗೋಡು ಚಾಲನೆ
.jpg)
ಸಾಗರ, ಎ. 6: ಹೊಸನಗರ ಹಾಗೂ ಸಾಗರ ತಾಲೂಕಿಗೆ ದಿನದ 24 ಗಂಟೆ ವಿದ್ಯುತ್ ನೀಡುವ ಸಂಬಂಧ ಇಂಧನ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ. ಇದರ ಆಗುಹೋಗುಗಳ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಹೊಸ ಬೆಳಕು ಯೋಜನೆಯಡಿ ರಿಯಾಯಿತಿ ದರದಲ್ಲಿ ಸಿಎಫ್‌ಎಲ್ ಬಲ್ಬ್‌ಗಳ ವಿತರಣೆಗೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ವಿದ್ಯುತ್ ಯೋಜನೆಗಾಗಿ ರಾಜ್ಯದ ಬೇರೆಬೇರೆ ಕಡೆ ತಮ್ಮ ಜಮೀನು ಮನೆ ಕಳೆದುಕೊಂಡು ಸಂತ್ರಸ್ತರಾದವರು ಇದ್ದಾರೆ. ಮುಂದೆ ಅವರು ನಮಗೂ ದಿನದ 24ಗಂಟೆ ವಿದ್ಯುತ್ ನೀಡಿ ಎಂದು ಕೇಳಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಚಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದರು. ಕ್ಷೇತ್ರವ್ಯಾಪ್ತಿಯಲ್ಲಿ ಹೊಸನಗರದ ನಗರದಲ್ಲಿರುವ ವಿದ್ಯುತ್ ಉಪಕೇಂದ್ರವನ್ನು ಉನ್ನತ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಹೊಸನಗರ ಉಪಕೇಂದ್ರದಲ್ಲಿ 33 ಕೆ.ವಿ. ಸಾಮರ್ಥ್ಯವಿದ್ದು, ಅದನ್ನು 110 ಕೆ.ವಿ.ಗೆ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ರಿಪ್ಪನಪೇಟೆಯಲ್ಲಿ 110 ಕೆ.ವಿ. ಸಾಮರ್ಥ್ಯದ ಉಪ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆನಂದಪುರಂನಿಂದ ರಿಪ್ಪನ್ ಪೇಟೆವರೆಗೆ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಕೇಬಲ್ ಬದಲಾವಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಕೆರೆಹಳ್ಳಿ-ರಿಪ್ಪನಪೇಟೆ, ಹೆದ್ದಾರಿಪುರ-ಮಸಗಲ್ಲಿ ಭಾಗದಲ್ಲೂ ಕೇಬಲ್ ಬದಲಾವಣೆ ಉದ್ದೇಶ ಹೊಂದಲಾಗಿದೆ. ಸಾಗರದಿಂದ ಹೊಸನಗರವರೆಗೆ ವಾಹಕ ಬದಲಾವಣೆಗೆ 4.30 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಪಂಪ್‌ಸೆಟ್ ಸಕ್ರಮಗೊಳಿಸುವ ನಿಟ್ಟಿನಲ್ಲಿ 8 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ. ಹೊಸದಾಗಿ ಲೈನ್ ಎಳೆಯುವುದು, ಟ್ರಾನ್ಸ್‌ಫಾರ್ಮರ್ ಅಳವಡಿಕೆ ಮಾಡಲಾಗುತ್ತಿದೆ. ಅದೇ ರೀತಿ ಹೊಸನಗರಕ್ಕೆ 6 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮೆಸ್ಕಾಂನ ಕಾರ್ಯಪಾಲಕ ಅಭಿಯಂತರ ತಿಮ್ಮಪ್ಪ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ ಕುಮಾರ್, ಚೆನ್ನಕೇಶವ, ವಿದ್ಯುತ್ ಸಲಹಾ ಸಮಿತಿ ಸದಸ್ಯರಾದ ವಿನೋದಾ ರುದ್ರಪ್ಪ ಗೌಡ, ವಿಶಾಲಾಕ್ಷಿ ಜಗದೀಶ್, ಅನ್ವರ್ ಬಾಷಾ, ಕೆ.ಎನ್.ವಿ.ಗಿರಿ ಉಪಸ್ಥಿತರಿದ್ದರು.





