ಡಿಸಿಸಿ ಬ್ಯಾಂಕ್ ಉಳಿವಿಗಾಗಿ ಪ್ರತಿಭಟನಾ ರ್ಯಾಲಿ

ಶಿವಮೊಗ್ಗ, ಮಾ. 6: ‘ರೈತರ ಸಹಕಾರಿ ಸಂಸ್ಥೆಯಾದ ಡಿಸಿಸಿ ಬ್ಯಾಂಕ್ ಉಳಿಯಲು ಬಿಡಿ’ ಎಂಬ ಘೋಷಣೆಯಡಿಯಲ್ಲಿ ಬುಧವಾರ ಜಿಲ್ಲಾ ಸಹಕಾರಿ ರೈತರ ಹೋರಾಟ ವೇದಿಕೆಯು ಶಿವಮೊಗ್ಗ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿತು.
ಅಂಬೇಡ್ಕರ್ ಭವನದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಿಸಿ ಕಚೇರಿ ಮುಂಭಾಗ ಧರಣಿ ನಡೆಯಿತು. ಪ್ರತಿಭಟನಾ ಸಭೆೆಯನ್ನುದ್ದೇಶಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು-ನಾಯಕರು ಮಾತನಾಡಿದರು. ತದನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಲಾಯಿತು. ಅಪಪ್ರಚಾರ: ಡಿಸಿಸಿ ಬ್ಯಾಂಕ್ 800 ಕೋಟಿ ರೂ. ಬಂಡವಾಳದಲ್ಲಿ, 28 ಶಾಖೆಗಳೊಂದಿಗೆ ಜಿಲ್ಲೆಯಾದ್ಯಂತ ವ್ಯವಹರಿಸುತ್ತಿದೆ. ಬ್ಯಾಂಕ್‌ನ ಶಿವಮೊಗ್ಗ ನಗರ ಶಾಖೆಯಲ್ಲಿ ನಡೆದ ಗೋಲ್ಡ್ ಲೋನ್ ಅವ್ಯವಹಾರವನ್ನು ಸಿಐಡಿ ಪೊಲೀಸರು ತನಿಖೆ ನಡೆಸಿ, ಅದರಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಅವ್ಯವಹಾರ ಮಾಡಿದ ಮೊತ್ತದ ವಸೂಲಿಗೆ ಸೂಕ್ತ ಕ್ರಮ ಜರಗಿಸಿದ್ದಾರೆ. ಇದೀಗ ಬ್ಯಾಂಕ್ ಪ್ರಗತಿಯತ್ತ ಹೆಜ್ಜೆ ಇಡಲಾ ರಂಭಿಸಿದೆ. ಆದರೆ ಬಿಜೆಪಿಯವರು ರೈತರ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ವನ್ನು ಮಾಡುತ್ತಿದ್ದಾರೆ. ಅಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟ ನಕಾರರು ಆರೋಪಿಸಿದ್ದಾರೆ. ತನಿಖೆಗೆ ಆಗ್ರಹ:
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು. ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಯ ಅಧ್ಯಕ್ಷರಾಗಿದ್ದ ವೇಳೆ ಆರಗ ಜ್ಞಾನೇಂದ್ರರವರು ನಡೆಸಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕ ಮಧು ಬಂಗಾರಪ್ಪ, ಕಾಂಗ್ರೆಸ್ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಮುಖಂಡ ತೀ.ನಾ.ಶ್ರೀನಿವಾಸ್, ಬಿ.ಆರ್.ಜಯಂತ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.







