ವಿವಿಧೆಡೆ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಡಿಸಿ
ಚಿಕ್ಕಮಗಳೂರು, ಎ.6: ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಶೇ.13ರಷ್ಟು ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶದ ಜೊತೆಗೆ ಇತರ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದು, ಸಮಸ್ಯೆ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಪಿ.ಷಡಕ್ಷರಿಸ್ವಾಮಿ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷದ ಮಳೆ ಕೊರತೆಯ ಜೊತೆಗೆ ಈ ಬಾರಿಯ ಬಿಸಿಲಿನ ತಾಪಕ್ಕೆ ಹಳ್ಳ, ಕೊಳ್ಳ, ಕೆರೆ, ಝರಿಗಳೊಂದಿಗೆ ಕೊಳವೆಬಾವಿ, ತೆರೆದ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಈಗ ಈ ಬರ ಪ್ರದೇಶದ ಜೊತೆಗೆ ಮಲೆನಾಡ ಭಾಗದಲ್ಲೂ ನೀರಿನ ಲಭ್ಯತೆಯಲ್ಲಿ ತೀವ್ರ ವ್ಯತ್ಯಯವಾಗಿದೆ ಎಂದರು. ನಗರದ 8 ವಾರ್ಡ್‌ಗಳು ಸೇರಿದಂತೆ ಗ್ರಾಮಾಂತರ ಭಾಗದ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಕಡೂರು ತಾಲೂಕಿನ ಕೆಲವೆಡೆ, ತರೀಕೆರೆ ತಾಲೂಕು ಮತ್ತು ಮೂಡಿಗೆರೆ ತಾಲೂಕಿನ ಬೀಜುವಳ್ಳಿ, ಬಣಕಲ್, ಇಂದ್ರವಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ತೀವ್ರವಾಗಿರುವ ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಹವ್ವಳ್ಳಿ ಕಾಲೋನಿ, ಹಿರೇಬಿದರೆ, ಅರವಿಂದನಗರ, ಹಿರೇಗೌಜ, ಗಾಣದಾಳು, ಮಾಗಡಿ, ಮಾಚೇನ ಹಳ್ಳಿ, ಕೆ.ಬಿ.ಹಾಳ್, ಹಳೇಲಕ್ಯಾ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿದೆ ಎಂದರು.
ನ.ರಾ.ಪುರ, ಮೂಡಿಗೆರೆ, ತರೀಕೆರೆ, ಶೃಂಗೇರಿ ತಾಲೂಕುಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಮುಂದಿನ 15 ದಿನಗಳಲ್ಲಿ ಮಳೆ ಬಾರದಿದ್ದರೆ ಜಿಲ್ಲೆಯ ಸುಮಾರು 437 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಬಹುದು. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ನೋಡಲ್ ಅಧಿಕಾರಿಗಳು ಹಾಗೂ ಗ್ರಾಪಂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ನುಡಿದರು.
ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿಭಾವಣೆಗೆ ಕಳೆದ ತಿಂಗಳು ಪ್ರತಿ ತಾಲೂಕಿಗೆ ಓರ್ವರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ನಂತರ ಅಧಿಕಾರಿಗಳ ಸಭೆ ಕರೆದು ಬರ ಹಾಗೂ ಕುಡಿಯುವ ನೀರು, ಮೇವಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕುರಿತಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.
ಸರಕಾರ ಕೂಡ ನಿಗಾವಹಿಸಿದ್ದು ಬರಪೀಡಿತ ತಾಲೂಕುಗಳಲ್ಲಿ ತುರ್ತು ಕುಡಿಯುವ ನೀರು ಹಾಗೂ ಮೇವು ಒದಗಿಸಲು ಮೂರು ತಾಲೂಕುಗಳಿಗೆ ತಲಾ ಐವತ್ತು ಲಕ್ಷ ರೂ. ಒದಗಿಸಿದೆ. ಕೊಳವೆಬಾವಿ ದುರಸ್ಥಿ, ಪುನಶ್ಚೇತನ, ಸ್ವಚ್ಛತೆ, ಪೈಪ್‌ಲೈನ್ ಅಳವಡಿಕೆ ಕಾರ್ಯಕ್ಕೆ ಪ್ರತ್ಯೇಕವಾಗಿ ತಲಾ 50 ಲಕ್ಷ ರೂ. ಬಿಡುಗಡೆ ಮಾಡಿದೆ.
ಜಿಪಂ ವ್ಯಾಪ್ತಿಗೂ ತಲಾ 50 ಲಕ್ಷ ರೂ. ಒದಗಿಸಲಾಗಿದೆ. ಅದರಲ್ಲಿ 100 ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗಿದೆ. ಅದೇ ರೀತಿ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ಸಮಿತಿ ನಿರ್ಣಯದಂತೆ 400 ಲಕ್ಷ ರೂ. ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.





