8 ಕಿ.ಮಿ. ಯುವಕನನ್ನು ಎಳೆದುಕೊಂಡು ಹೋಗಿ ಕೊಂದ ಟ್ರಕ್ ಡ್ರೈವರ್
ನಿಲ್ಲಿಸಲು ಬೇಡಿಕೊಂಡ ಗೆಳೆಯರಿಗೆ ರಾಡ್ ನಲ್ಲಿ ಹಲ್ಲೆ

ಹೊಸದಿಲ್ಲಿ, ಎ.6 : ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದ ಟ್ರಕ್ಕೊಂದು ಅದರಲ್ಲಿದ್ದ ಯುವಕನೊಬ್ಬನನ್ನು 8 ಕಿ.ಮಿ. ದೂರ ಎಳೆದುಕೊಂಡು ಹೋದ ಹಾಗು ಈ ಸಂದರ್ಭದಲ್ಲಿ ಟ್ರಕ್ ನಿಲ್ಲಿಸುವಂತೆ ಅದರ ಡಮ್ಪರ್ ನಲ್ಲಿ ನೇತಾಡಿ ಬೇಡಿದ ಯುವಕನ ಇಬ್ಬರು ಸ್ನೇಹಿತರಿಗೆ ಟ್ರಕ್ ಹೆಲ್ಪರ್ ರಾಡ್ ನಲ್ಲಿ ಹಲ್ಲೆ ಮಾಡಿದ ಹೇಯ, ದಾರುಣ ಘಟನೆ ಆಗ್ನೇಯ ದೆಹಲಿಯ ಲಜಪತ್ ನಗರದಲ್ಲಿ ನಡೆದಿದೆ.
ಅಹ್ಮದ್ ಹಾಗು ಆತನ ಇಬ್ಬರು ಸ್ನೇಹಿತರಾದ ಗೌರವ್ ಹಾಗು ಶಿವಂ ಅವರು ಸ್ಕೂಟರ್ ಒಂದರಲ್ಲಿ ಹೋಗುತ್ತಿರುವಾಗ ವೇಗವಾಗಿ ಬಂದ ಟ್ರಕ್ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆದರೆ ತಕ್ಷಣ ನಿಲ್ಲಿಸದ ಟ್ರಕ್ ಡ್ರೈವರ್ ಅಬ್ದುಲ್ ಗಫೂರ್ ಎಂಬಾತ ಟ್ರಕ್ ನ ಸಸ್ಪೆನ್ಶನ್ ಗೆ ಜೋತು ಬಿದ್ದ ಅಹ್ಮದ್ ಹಾಗು ಆತನ ಸ್ಕೂಟರ್ ಜೊತೆ ಟ್ರಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಅಹ್ಮದ್ ನ ಸ್ನೇಹಿತರು ಟ್ರಕ್ ನ ಸರಳುಗಳನ್ನು ಹಿಡಿದು ನೇತಾಡಿಕೊಂಡು ಟ್ರಕ್ ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಟ್ರಕ್ ನಿಲ್ಲಿಸುವ ಬದಲು ಟ್ರಕ್ ಕ್ಲೀನರ್ ಇವರಿಬ್ಬರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ.
ಸಾರ್ವಜನಿಕರ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಟ್ರಕ್ ನಿಲ್ಲಿಸಲು ಪ್ರಯತ್ನಿಸಿದಾಗಲೂ ಮೊದಲು ನಿಲ್ಲಿಸಲಿಲ್ಲ. ಕೊನೆಗೆ ಸುಮಾರು 8 ಕಿ ಮಿ ದೂರ ಕ್ರಮಿಸಿದ ಬಳಿಕ ಪೊಲೀಸರು ಟ್ರಕ್ ನಿಲ್ಲಿಸಿದ್ದಾರೆ. ತಕ್ಷಣ ಅಹ್ಮದ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ಅಲ್ಲಿ ವೈದ್ಯರು ಘೋಷಿಸಿದರು.





