ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಸರಕಾರ -ಉಪನ್ಯಾಸಕರ ಸಭೆಯಲ್ಲಿ ಯಾವುದೇ ನಿರ್ಧಾರ ಇಲ್ಲ
ನಾಳೆ ಮಧ್ಯಾಹ್ನ 12:30ಕ್ಕೆ ಪಿಯು ಉಪನ್ಯಾಸಕರೊಂದಿಗೆ ಇನ್ನೊಂದು ಸುತ್ತಿನ ಸಭೆ

ಬೆಂಗಳೂರು, ಎ.6: ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ‍್ ನೇತೃತ್ವದಲ್ಲಿ ಇಂದು ರಾತ್ರಿ ನಡೆದ ಸರಕಾರ ಮತ್ತು ಪಿಯು ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಉಪನ್ಯಾಸಕರ ಬೇಡಿಕೆಗಳಿಗೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಅಂತ್ಯಗೊಂಡಿದೆ.
ಗುರುವಾರ ಮಧ್ಯಾಹ್ನ 12:30ಕ್ಕೆ ನಡೆಯಲಿರುವ ಇನ್ನೊಂದು ಸುತ್ತಿನ ಸಭೆಯಲ್ಲಿ ಉಪನ್ಯಾಸಕರು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಕುಮಾರ‍್ ನಾಯಕ್ ವರದಿ ಅನುಷ್ಟಾನಕ್ಕೆ ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ. ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸರಕಾರ ಗೊಂದಲಕ್ಕೆ ಸಿಲುಕಿದೆ.ಸರಕಾರ ಅಂತಿಮ ನಿಲುವು ಪ್ರಕಟಿಸುವ ತನಕ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರವನ್ನು ಮುಂದುವರಿಸುವ ಯೋಜನೆಯಲ್ಲಿದ್ದಾರೆ.
ಇಂದು ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಪಿಯು ಮಂಡಳಿಯ ನಿರ್ದೇಶಕ ಡಾ.ರಾಮೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇ ಗೌಡ , ಪಿಯು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.





