ರಸ್ತೆಗಳ ಸುರಕ್ಷತೆಗೆ ಆಧುನಿಕ ತಂತ್ರಜ್ಞಾನ ಬಳಕೆ: ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು, ಎ.6: ರಾಜ್ಯಾದ್ಯಂತ ರಸ್ತೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೊಂಡು ವೈಜ್ಞಾನಿಕವಾಗಿ ಯೋಜನೆಗಳನ್ನು ತಯಾರಿಸಲು ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ ನ್ಯೂಝಿಲ್ಯಾಂಡ್‌ನಿಂದ 1.29 ಕೋಟಿ ರೂ.ವೌಲ್ಯದ ‘ಫಾಲಿಂಗ್ ವೇಯ್ಟಾ ಡಿಫ್ಲೆಕ್ಟೊಮೀಟರ್’(ಎಫ್‌ಡಬ್ಲುಡಿ)ನ್ನು ಖರೀದಿಸಲಾಗಿದೆ. ಈ ಉಪಕರಣದ ನೆರವಿನೊಂದಿಗೆ ರಸ್ತೆಯ ಮೇಲ್ಮೈ ಪದರವನ್ನು ಯಾವುದೇ ರೀತಿಯಲ್ಲಿ ಹಾನಿಗೊಳಿಸದೆ ಮಾಹಿತಿ ಸಂಗ್ರಹಿಸಬಹುದು ಎಂದರು.
ರಸ್ತೆಯ ಮೇಲ್ಪದರದ ಮೇಲೆ ಭಾರವನ್ನು ಹಾಕಿದಾಗ ರಸ್ತೆಯ ಮೇಲ್ಮೈ ಹೇಗೆ ಬಾಗುತ್ತದೆ ಎನ್ನುವುದನ್ನು ಆಧರಿಸಿ, ಪಲ್ಸ್ ಮುಖಾಂತರ ಮಾಹಿತಿಯನ್ನು ಸಂಗ್ರಹಿಸುತ್ತದೆ. ದೇಶದಲ್ಲೇ ಈ ರೀತಿಯ ವಿಶಿಷ್ಟ ಉಪಕರಣವನ್ನು ಬಳಸುತ್ತಿರುವ ಮೊದಲ ರಾಜ್ಯ ನಮ್ಮದು ಎಂದು ಅವರು ಹೇಳಿದರು.
ಇದಲ್ಲದೆ, ಜಿಪಿಆರ್ ಎಂಬ ಉಪಕರಣವನ್ನು 75 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಲಾಗಿದ್ದು, ಭೂಮಿಯ ಒಳಗಿನ ರಚನೆಗಳ ಭೌತಿಕ ಗುಣವಿಶೇಷಗಳನ್ನು ಯಾವುದೇ ರೀತಿಯ ಮಾರ್ಪಾಡು ಇಲ್ಲದೆ ಪ್ರತಿಬಿಂಬಗಳ ಸಂಕೇತದ ಮೂಲಕ ಭೂಮಿಯ ಕೆಳಮೈ ರಚನೆಗಳನ್ನು ತಿಳಿಸುತ್ತದೆ ಎಂದು ಮಹದೇವಪ್ಪ ತಿಳಿಸಿದರು.
ಜಿಪಿಆರ್ ಸಾಂಪ್ರದಾಯಿಕವಾಗಿ ಮಾನವ ಸಂಪನ್ಮೂಲವನ್ನು ಉಪಯೋಗಿಸದೆ ಭೂಮಿಯ ಪದರಗಳ ವೌಲ್ಯಮಾಪನ ಮಾಡುತ್ತದೆ. ರಸ್ತೆಯ ರಚನೆಯ ಚಿತ್ರಣವನ್ನು ನಿರಂತರವಾಗಿ ನೀಡುವುದು ಇದರ ಪ್ರಾಮುಖ್ಯತೆಯಾಗಿದೆ. ಈ ಉಪಕರಣದ ಬಳಕೆಯಿಂದ ಭೂಮಿಯ ಒಳಭಾಗದಲ್ಲಿ ಅಳವಡಿಸಿರುವ ಅನುಸಾಧನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಭೂಮಿಯ ಒಳಗೆ ಅಳವಡಿಸಿರುವ ಮೆಟಾಲಿಕ್ ಮತ್ತು ಮೆಟಾಲಿಕ್ ಅಲ್ಲದ ಪೈಪುಗಳ ಗಾತ್ರ, ಕೇಬಲ್‌ಗಳು ಮತ್ತು ಇತರೆ ಇರಬಹುದಾದ ವಸ್ತುಗಳನ್ನು ನಿಗದಿತ ಸಮಯದಲ್ಲಿ ಗುರುತಿಸುತ್ತದೆ ಮತ್ತು ಭೂಮಿಯ ಒಳರಚನೆಯನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ ಎಂದು ಮಹದೇವಪ್ಪ ತಿಳಿಸಿದರು.
ಈ ಉಪಕರಣಗಳನ್ನು ಬಳಸಿಕೊಂಡು ಪ್ರತಿದಿನ ಸರಾಸರಿ 100 ಕಿ.ಮೀ ನಂತೆ ಕಳೆದ ಎರಡು ತಿಂಗಳಿಂದ 5 ಸಾವಿರ ಕಿ.ಮೀ ರಸ್ತೆಯ ಸಾಮರ್ಥ್ಯದ ಸಮೀಕ್ಷೆ ನಡೆಸಲಾಗಿದೆ. ಆರು ತಿಂಗಳೊಳಗೆ ರಾಜ್ಯದ ಒಟ್ಟು 25 ಸಾವಿರ ಕಿ.ಮೀ ರಸ್ತೆಯ ಸಮೀಕ್ಷೆ ನಡೆಸಿ ಸಾಮರ್ಥ್ಯದ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ರಸ್ತೆಯ ನಿರ್ವಹಣೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ವೈಜ್ಞಾನಿಕವಾಗಿ ಮಿತವ್ಯಯದಲ್ಲಿ ಕೈಗೊಳ್ಳಬಹುದು. ಈ ಉಪಕರಣದಲ್ಲಿ ರಸ್ತೆಯ ಚಿತ್ರೀಕರಣಕ್ಕಾಗಿ ಕ್ಯಾಮರಾವನ್ನು ಅಳವಡಿಸಲಾಗಿದೆ. ರಸ್ತೆಯ ಸ್ಥಿತಿಗತಿಗಳನ್ನು ದಾಖಲಿಸಲು ಗಣಕೀಕೃತ ರೇಟಿಂಗ್ ಕೀ ಬೋರ್ಡ್ ಅಳವಡಿಸಲಾಗಿದೆ ಎಂದು ಮಹದೇವಪ್ಪ ತಿಳಿಸಿದರು.
ಸೇತುವೆ, ಅಣೆಕಟ್ಟುಗಳ ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಮತ್ತೊಂದು ಅತ್ಯಾಧುನಿಕವಾದ ಯಂತ್ರವನ್ನು ಆಮದು ಮಾಡಿ ಕೊಳ್ಳಲಾಗುತ್ತಿದೆ. ಈ ಯಂತ್ರಗಳು ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು, ಸರಕಾರದ ಕಾಮಗಾರಿಗಳನ್ನು ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.





