21 ಬಂಧನ; 10 ಭಾರತೀಯರು
ವೀಸಾ ಹಗರಣ ಬಯಲಿಗೆಳೆಯಲು ಅಮೆರಿಕದ ಸ್ಟಿಂಗ್ ಕಾರ್ಯಾಚರಣೆ
ವಾಶಿಂಗ್ಟನ್, ಎ. 6: ಸ್ಟಿಂಗ್ ಕಾರ್ಯಾಚರಣೆಯೊಂದನ್ನು ನಡೆಸಿರುವ ಅಮೆರಿಕದ ಅಧಿಕಾರಿಗಳು, ವೀಸಾ ಹಗರಣವೊಂದನ್ನು ಬಯಲುಗೊಳಿಸಿ 21 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 10 ಮಂದಿ ಭಾರತೀಯ ಅಮೆರಿಕನ್ನರು.
ರಾಷ್ಟ್ರವ್ಯಾಪಿ ಕಾರ್ಯಾಚರಣೆ ನಡೆಸಿರುವ ಫೆಡರಲ್ ಅಧಿಕಾರಿಗಳು ನ್ಯೂಯಾರ್ಕ್, ನ್ಯೂಜರ್ಸಿ, ವಾಶಿಂಗ್ಟನ್ ಮತ್ತು ವರ್ಜೀನಿಯಗಳಿಂದ 21 ಮಂದಿಯನ್ನು ಬಂಧಿಸಿದ್ದಾರೆ.
‘‘ನಕಲಿ ವಿಶ್ವವಿದ್ಯಾನಿಲಯವೊಂದರಲ್ಲಿ ವ್ಯಕ್ತಿಗಳನ್ನು ಸೇರ್ಪಡೆಗೊಳಿಸುವ ಮೂಲಕ ವೀಸಾಗಳನ್ನು ಪಡೆಯಲು ಬಂಧಿತರು ಯೋಜನೆಗಳನ್ನು ರೂಪಿಸಿದ್ದರು. ಆದರೆ, ಅವರ ದುರದೃಷ್ಟಕ್ಕೆ ಈ ನಕಲಿ ವಿಶ್ವವಿದ್ಯಾನಿಲಯವನ್ನು ನಡೆಸುತ್ತಿದ್ದುದು ಆಂತರಿಕ ಭದ್ರತೆ ಇಲಾಖೆಯ ಮಫ್ತಿಯಲ್ಲಿರುವ ಅಧಿಕಾರಿಗಳು’’ ಎಂದು ನ್ಯೂಜರ್ಸಿಯ ಅಟಾರ್ನಿ ಪೌಲ್ ಜೆ. ಫಿಶ್‌ಮನ್ ಸುದ್ದಿಗಾರರಿಗೆ ತಿಳಿಸಿದರು.
ಬಂಧಿತರು ದಲ್ಲಾಳಿಗಳು, ನೇಮಕಾತಿ ಸಂಸ್ಥೆಗಳನ್ನು ನಡೆಸುವವರು ಹಾಗೂ ಉದ್ಯೋಗದಾತರು. ಅವರು 26 ದೇಶಗಳ ಸುಮಾರು 1,000 ವಿದೇಶಿ ರಾಷ್ಟ್ರೀಯರಿಗೆ ವಿದ್ಯಾರ್ಥಿ ವೀಸಾಗಳು ಮತ್ತು ವಿದೇಶಿ ಕೆಲಸಗಾರ ವೀಸಾಗಳನ್ನು ಕಾನೂನು ಬಾಹಿರವಾಗಿ ಹಾಗೂ ವಂಚನೆಯ ಮೂಲಕ ಪಡೆದಿದ್ದರು ಅಥವಾ ಪಡೆಯಲು ಪ್ರಯತ್ನಿಸಿದ್ದರು.
ಸ್ಟಿಂಗ್ ಕಾರ್ಯಾಚರಣೆಯ ಫಲಶ್ರುತಿಯಂತೆ, ವೀಸಾ ಮತ್ತು ಅಮೆರಿಕದಲ್ಲಿ ಕೆಲಸ ಮಾಡಲು ಪರವಾನಿಗೆಯನ್ನು ಪಡೆದವರ ಪೈಕಿ ಹೆಚ್ಚಿನ ವಿದ್ಯಾರ್ಥಿಗಳು ಭಾರತೀಯರು. ವೀಸಾ ಮತ್ತು ಕೆಲಸ ಮಾಡುವ ಪರವಾನಿಗೆಯನ್ನು ಪಡೆಯಲು ಅವರು ದಲ್ಲಾಳಿಗಳಿಗೆ ಭಾರೀ ಪ್ರಮಾಣದ ಹಣವನ್ನು ನೀಡಿದ್ದರು.
ಆದಾಗ್ಯೂ, ಈ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಅಧಿಕಾರಿಗಳು ನೀಡಿಲ್ಲ. ವಲಸೆ ಮತ್ತು ಕಾನೂನು ಅನುಷ್ಠಾನ ಅಧಿಕಾರಿಗಳು ನಡೆಸಿರುವ ಈ ಸ್ಟಿಂಗ್ ಕಾರ್ಯಾಚರಣೆ ಒಂದು ವರ್ಷದಿಂದ ನಡೆಯುತ್ತಿತ್ತು.
ಬಂಧಿತರ ರಾಷ್ಟ್ರೀಯತೆಯನ್ನು ಅಧಿಕಾರಿಗಳು ನೀಡಿಲ್ಲವಾದರೂ, ಹೆಸರುಗಳ ಆಧಾರದಲ್ಲಿ ಹೇಳುವುದಾದರೆ ಅವರಲ್ಲಿ 10 ಮಂದಿ ಭಾರತೀಯರು ಅಥವಾ ಭಾರತೀಯ ಮೂಲದವರು.
ಅವರುಗಳೆಂದರೆ: ತಜೇಶ್ ಕೊಡಾಲಿ, ಜ್ಯೋತಿ ಪಟೇಲ್, ಶಹ್ಜಾಜಿ ಎಂ. ಪರ್ವೀನ್, ನರೇಂದ್ರ ಸಿಂಗ್ ಪ್ಲಾಹ, ಸಂಜೀವ್ ಸುಖಿಜ, ಹರ್‌ಪ್ರೀತ್ ಸಚ್‌ದೇವ, ಅವಿನಾಶ್ ಶಂಕರ್, ಕಾರ್ತಿಕ್ ನಿಮ್ಮಲ, ಗೋವರ್ಧನ್ ದ್ಯಾವರಶೆಟ್ಟಿ ಮತ್ತು ಸೈಯದ್ ಖಾಸಿಂ ಅಬ್ಬಾಸ್.





