ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳಿಗೆ ಸಬ್ಸಿಡಿ ಮೊತ್ತ 50 ಲಕ್ಷ ಏರಿಕೆಗೆ ರಾಜೇಂದ್ರಸಿಂಗ್ ಬಾಬು ಆಗ್ರಹ

ಬೆಂಗಳೂರು, ಎ.6: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಸಿನೆಮಾಗಳಿಗೆ ಕೊಡುವ ಸಬ್ಸಿಡಿ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಏರಿಸಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಿಸಿದ್ದಾರೆ.
ಬುಧವಾರ ವಾರ್ತಾ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ 63ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳಿಗೆ ಸಬ್ಸಿಡಿ ಮೊತ್ತವನ್ನು ಒಂದು ಕೋಟಿ ರೂ.ಗೆ ಏರಿಸಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕನಿಷ್ಠ 50 ಲಕ್ಷ ರೂ.ಗೆ ಏರಿಸಬೇಕು. ಇದರಿಂದ ಯುವಜನಾಂಗ ಉತ್ತಮ ಚಿತ್ರಗಳತ್ತ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಮುಖ್ಯನೆಲೆಯ ಚಿತ್ರಗಳು ಮಾತ್ರ ರಾಷ್ಟ್ರಪ್ರಶಸ್ತಿಯತ್ತ ಗಮನ ಕೊಡುತ್ತಿಲ್ಲ. ಹಾಗೂ ಇಲ್ಲಿಯ ಮುಖ್ಯನೆಲೆಯಲ್ಲಿ ಗುರುತಿಸಿಕೊಂಡಿರುವ ನಾಯಕರು ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗುವಂತಹ ಚಿತ್ರಗಳಲ್ಲಿ ನಟಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಚೌಕಟ್ಟುಗಳನ್ನು ಮೀರಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸುವಂತಹ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಹಿರಿಯ ನಟ ಡಾ.ರಾಜ್‌ಕುಮಾರ್‌ರವರ ಬದುಕಿನ ಆದರ್ಶ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತಗೊಳ್ಳಬಾರದು. ಅವರು ವ್ಯಕ್ತಿತ್ವವನ್ನು ದೇಶದ ಗಡಿಯನ್ನು ಮೀರಿ ವಿಸ್ತರಿಸಬೇಕಾದ ಅಗತ್ಯವಿದೆ. ಹೀಗಾಗಿ ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಬರೆದಿರುವ ‘ಡಾ.ರಾಜ್‌ಕುಮಾರ್ ಅವರ ಸಮಗ್ರ ಚರಿತ್ರೆ’ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಲು ಕರ್ನಾಟಕ ಚಲನಚಿತ್ರ ಅಕಾಡಮಿ ಸಿದ್ಧವಿದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದರು.
ಹಿರಿಯ ಕಲಾವಿದೆ ಹಾಗೂ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ ಮಾತನಾಡಿ, ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯಿಂದ ಕರ್ನಾಟಕದ ಸಿನೆಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಿಂದಲೇ ಉತ್ತಮ ತೀರ್ಪುಗಾರರನ್ನು ರಾಷ್ಟ್ರ ಪ್ರಶಸ್ತಿ ತೀರ್ಪು ಸಮಿತಿಗೆ ಕಳುಹಿಸುವತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಅಭಿಪ್ರಾಯಿಸಿದರು
ಹಿರಿಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಕನ್ನಡ ಸಿನೆಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಸಿಗುತ್ತಿರುವುದು ಇದೇ ಮೊದಲಲ್ಲ. ಕನ್ನಡ ಸಿನೆಮಾಗಳು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿವೆ. ಆದರೆ, ಈ ಬಾರಿ ಡಾ.ರಾಜ್‌ಕುಮಾರ್ ಅವರ ಸಮಗ್ರ ಚರಿತ್ರೆ ಗ್ರಂಥಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಸಿಕ್ಕಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿ, ಈ ಬಾರಿ ಕನ್ನಡ ಸಿನೆಮಾ ಕ್ಷೇತ್ರಕ್ಕೆ ನಾಲ್ಕು ಪ್ರಶಸ್ತಿ ಬಂದಿರೋದು ಸಂತಸ ತಂದಿದೆ. ಶ್ರೇಷ್ಠ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ‘ತಿಥಿ’ ಚಿತ್ರ ಆಯ್ಕೆಯಾಗಿರುವುದು ಸೂಕ್ತವಾಗಿದೆ. ಇದೇ ರೀತಿಯಲ್ಲಿ ಕನ್ನಡ ಸಿನೆಮಾಗಳು ಪ್ರಶಸ್ತಿಯನ್ನು ಪಡೆಯುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ(ಸ್ವರ್ಣ ಕಮಲ ಪ್ರಶಸ್ತಿ), ನಿರ್ದೇಶಕ ರಾಮ್‌ರೆಡ್ಡಿ(ಶ್ರೇಷ್ಠ ಪ್ರಾದೇಶಿಕ ಚಿತ್ರ), ನಿರ್ದೇಶಕರಾದ ಓ.ಪಿ.ಶ್ರೀವಾತ್ಸವ, ಜಾಕೋಬ್ ವರ್ಗೀಸ್, ಎನ್.ದಿನೇಶ್ ರಾಜ್‌ಕುಮಾರ್, ಮ್ಯಾಥ್ಯೂ ವರ್ಗೀಸ್‌ರವರನ್ನು ಸನ್ಮಾನಿಸಲಾಯಿತು.
ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದ್, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರಿದ್ದರು.





