ಬ್ರೆಝಿಲ್‌ನ ಕೋಚ್ ಆಗಿ ಡುಂಗಾ ಮುಂದುವರಿಕೆ

ರಿಯೊ ಡಿ ಜನೈರೊ, ಎ.6:ಇತ್ತೀಚೆಗಿನ ದಿನಗಳಲ್ಲಿ ಬ್ರೆಝಿಲ್ ಫುಟ್ಬಾಲ್ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಈ ವರ್ಷದ ಕೋಪಾ ಅಮೆರಿಕ ಹಾಗೂ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಡುಂಗಾ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ತಂಡದ ತಾಂತ್ರಿಕ ನಿರ್ದೇಶಕ ಗಿಲ್ಮಾರ್ ರಿನಾಲ್ಡೊ ತಿಳಿಸಿದ್ದಾರೆ.
ಬ್ರೆಝಿಲ್ ಫುಟ್ಬಾಲ್ ಕಾನ್ಫಡರೇಶನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿನಾಲ್ಡೊ , ‘‘ಡುಂಗಾ ಅವರನ್ನು ಕೋಚ್ ಹುದ್ದೆಯಿಂದ ಬದಲಿಸುವ ಸಾಧ್ಯತೆಯಿಲ್ಲ. ಇದೊಂದು ರೂಟಿನ್ ಸಭೆಯಾಗಿತ್ತು. ಕೋಪಾ ಅಮೆರಿಕ ಹಾಗೂ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡದ ಯೋಜನೆಯ ಬಗ್ಗೆ ಚರ್ಚಿಸಲಾಯಿತು’’ ಎಂದು ತಿಳಿಸಿದರು.
ಬ್ರೆಝಿಲ್ ಇತ್ತೀಚೆಗೆ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ಡುಂಗಾರನ್ನು ಕೋಚ್ ಹುದ್ದೆಯಿಂದ ಕೆಳಗಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. 2018ರ ವಿಶ್ವಕಪ್‌ನ ಅರ್ಹತಾ ಪಂದ್ಯಗಳಲ್ಲಿ ಮೊದಲ ಆರು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿದ್ದು, ದಕ್ಷಿಣ ಅಮೆರಿಕ ದೇಶಗಳಲ್ಲಿ 6ನೆ ಸ್ಥಾನದಲ್ಲಿದೆ. 100ನೆ ಆವೃತ್ತಿಯ ಕೋಪಾ ಅಮೆರಿಕ ಟೂರ್ನಿಯು ಈ ವರ್ಷ ಅಮೆರಿಕದಲ್ಲಿ ಜೂ.3 ರಿಂದ 26ರ ತನಕ ನಡೆಯುವುದು. ಒಲಿಂಪಿಕ್ಸ್ ಪುಟ್ಬಾಲ್ ಟೂರ್ನಮೆಂಟ್ ಬ್ರೆಝಿಲ್‌ನ ಆರು ನಗರಗಳಲ್ಲಿ ಆ.3 ರಿಂದ 20ರ ತನಕ ನಡೆಯಲಿದೆ.







